Bangalore: ಊಟ ಮಾಡಲೆಂದು ಹೋಟೆಲ್ಗೆ ಹೋಗುತ್ತಿದ್ದ ಅಣ್ಣ ತಂಗಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಅಣ್ಣನಿಗೆ ಥಳಿಸಿ, ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಆಸಿಫ್ ಮತ್ತು ಸೈಯದ್ ಮೂಷರ್ ಬಂಧಿತ ಆರೋಪಿಗಳು.
ಏ.2 ರ ತಡರಾತ್ರಿ 1.30 ರ ಸುಮಾರಿಗೆ ಮಹದೇವಪುರದ ಲೌರಿ ಮೆಮೋರಿಯಲ್ ಶಾಲೆ ಬಳಿ ಈ ದುರ್ಘಟನೆ ನಡೆದಿದೆ. 19 ವರ್ಷದ ಬಿಹಾರ ಮೂಲದ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಹಾರ ಮೂಲದ ಅಣ್ಣ-ತಂಗಿ ಕೆಲ ತಿಂಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದರು. ಯುವತಿ ಕೇರಳದ ಎರ್ನಾಕುಲಂನಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಳು. ಅಲ್ಲಿಯೇ ಏಲಕ್ಕಿ ಬಿಡಿಸುವ ಕೆಲಸಕ್ಕೆ ಸೇರಿದ್ದಳು. ಆದರೆ ಕೆಲಸ ಇಷ್ಟವಾಗದ ಕಾರಣ ತನ್ನ ಊರು ಬಿಹಾರಕ್ಕೆ ಹೋಗುವುದಾಗಿ ಸಹೋದರನಿಗೆ ತಿಳಿಸಿ, ಎರ್ನಾಕುಲಂನಿಂದ ಬೆಂಗಳೂರಿಗೆ ಬಂದಿದ್ದಳು. ಆಕೆಯ ಸಹೋದರ ಕೂಡಾ ಬಿಹಾರಕ್ಕೆ ಬರುವುದಾಗಿ ತಿಳಿಸಿದ್ದ. ಯುವತಿ ತಡರಾತ್ರಿ 1.15 ಕ್ಕೆ ಕೆ.ಆರ್.ಪುರ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾಳೆ.
ನಂತರ ಸಹೋದರನ ಬಳಿ ನನಗೆ ಹಸಿವಾಗುತ್ತಿದೆ. ಊಟ ಮಾಡಿಕೊಂಡು ಹೋಗೋಣ ಎಂದಿದ್ದು, ಸ್ಟ್ರೀಟ್ ಫುಡ್ ಹೋಟೆಲ್ ಹುಡುಕಿಕೊಂಡು ಲೌರಿ ಮೆಮೋರಿಯಲ್ ಶಾಲೆ ಗೇಟ್ ಬಳಿ ನಡೆದುಕೊಂಡು ಹೋಗುವಾಗ ತಡರಾತ್ರಿ 1.30 ರ ಸಮಯದಲ್ಲಿ ಇವರನ್ನು ನೋಡಿದ ಆರೋಪಿಗಳು ಹಿಂಬಾಲಿಸಿ, ಅಡ್ಡ ಗಟ್ಟಿ ಹಲ್ಲೆ ಮಾಡಿದ್ದಾರೆ.
ಚಾಲಕ ಸೈಯದ್ ಸಹೋದರನಿಗೆ ಥಳಿಸಿದ್ದು, ಮತ್ತೋರ್ವ ಆರೋಪಿ ಆಸೀಫ್ ಯುವತಿಯನ್ನು ಕಾಮಗಾರಿ ನಡೆಯುತ್ತಿರುವ ಮೆಟ್ರೋ ಪಿಲ್ಲರ್ ಪಕ್ಕಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಈ ಸಮಯದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ದೊಡ್ಡನೆಕ್ಕುಂದಿಯಿಂದ ವಾಪಾಸು ಬರುವಾಗ ಯುವತಿ ಕೂಗಾಡುತ್ತಿರುವುದನ್ನು ಗಮನಿಸಿ 112 ಗೆ ಕರೆ ಮಾಡಿದ್ದಾನೆ. ಅಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೂ ವಿಷಯ ತಿಳಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿಗಳು ಪರಾರಿಯಾಗಿದ್ದಾರೆ.
ಕೂಡಲೇ ಸಹೋದರನಿಂದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಕೃತ್ಯ ನಡೆದ ಒಂದು ಗಂಟೆಯೊಳಗೆ ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
