Marriage: ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದ ಯುವತಿಯೋರ್ವಳು ವರನನ್ನು ಕೊಲ್ಲಲು ಸುಪಾರಿ ನೀಡಿದ ಘಟನೆ ಪುಣೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಐವರ ಬಂಧನ ಮಾಡಿದ್ದು, ವಧು ತಲೆಮರೆಸಿಕೊಂಡಿದ್ದಾಳೆ.
ಅಹಲ್ಯಾನಗರದ ಮಯೂರಿ ಸುನಿಲ್ ದಾಂಗ್ಡೆ ಎಂಬ ಆರೋಪಿ, ಮಹಿ ಜಲಗಾಂವ್‌ನ ಸಾಗರ್ ಜಯಸಿಂಗ್ ಕದಮ್ ಎಂಬವರನ್ನು ಮದುವೆಯಾಗಬೇಕಿತ್ತು. ನಿಶ್ಚಿತಾರ್ಥ, ವಿವಾಹಪೂರ್ವ ಫೋಟೋಶೂಟ್ ಆದ ನಂತರ ಮಯೂರಿ ಸಾಗರ್ ಅವರನ್ನು ಮದುವೆಯಾಗದಿರಲು ನಿರ್ಧಾರ ಮಾಡಿದ್ದಳು.
ಹೀಗಾಗಿ ಆತನನ್ನು ಕೊಲ್ಲಲು ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಮಯೂರಿ ಈಕೆಯ ಸಹಚರ ಸಂದೀಪ್ ಗಾವ್ಡೆ ಸಾಗರ್‌ನನ್ನು ಕೊಲ್ಲಲು 1.50 ಲಕ್ಷ ರೂ. ಸುಪಾರಿ ನೀಡಿರುವ ಕುರಿತು ಆರೋಪವಿದೆ.
ಜಲಗಾಂವ್‌ನ ಹೋಟೆಲ್‌ನಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿರುವ ಸಾಗರ್ ಮೇಲೆ ಫೆ.27 ರಂದು ಹಲ್ಲೆ ಮಾಡಲಾಯಿತು. ಆತನ ಹೋಟೆಲ್ ಬಳಿ ಥಳಿಸಲಾಯಿತು. ನಂತರ ಯಾವತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲು ಮುರಿದು ತಲೆ ಮತ್ತು ಬೆನ್ನಿಗೆ ಗಾಯ ಉಂಟಾದ ಸಾಗರ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.
ತನಿಖೆಯಲ್ಲಿ ಮದುವೆಯಾಗಬೇಕಿದ್ದ ಹುಡುಗಿಯೇ ಕೊಲ್ಲಲು ಸುಪಾರಿ ನೀಡಿರುವುದು ತಿಳಿದು ಬಂದಿದೆ. ಪೊಲೀಸರು ಐವರು ಶಂಕಿತರನ್ನು ಬಂಧನ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 109, 61(2), ಮತ್ತು 126(2) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.
