Puttur: ಇತಿಹಾಸ ಪ್ರಸಿದ್ಧ ಪುತ್ತೂರು (Puttur) ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾಗದ್ದೆಯಲ್ಲಿ ಆಸಕ್ತ ವ್ಯಾಪಾರಸ್ಥರೆಲ್ಲರಿಗೂ ಅವಕಾಶ ಸಿಗುವ ರೀತಿಯಲ್ಲಿ ಏಲಂ ವ್ಯವಸ್ಥೆ ಮಾಡಲಾಗಿದೆ. ಇದು ಬಡವರಿಗೂ ಅನುಕೂಲವಾಗಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಹೇಳಿದರು.
ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಸಲುವಾಗಿ ಏ.3ರಂದು ದೇವಳದ ಸಭಾಭವನದಲ್ಲಿ ನಡೆದ, ಜಾತ್ರಾಗದ್ದೆಯ ತಾತ್ಕಾಲಿಕ ಏಲಂ ಪ್ರಕ್ರಿಯೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲಾ ವ್ಯಾಪಾರಸ್ಥರು ಇಲ್ಲದೆ ಜಾತ್ರೆ ಇಲ್ಲ. ಜಾತ್ರೆ ಇಲ್ಲದೆ ವ್ಯಾಪಾರಸ್ಥರೂ ಇಲ್ಲ. ಹಾಗಾಗಿ ಭೇದ-ಭಾವ ಇಲ್ಲದೆ ಎಲ್ಲರೂ ಉತ್ತಮ ವ್ಯಾಪಾರ ನಡೆಸಬೇಕು. ಏನಾದರೂ ತೊಂದರೆ ಇದ್ದರೆ ನೇರ ನಮ್ಮ ಕಚೇರಿಯನ್ನು ಸಂಪರ್ಕಿಸಿ ಅಥವಾ ನನ್ನನ್ನು ಸಂಪರ್ಕಿಸಿ ಎಂದರು.
ಕಳೆದ ಬಾರಿ 250 ತಾತ್ಕಾಲಿಕ ಅಂಗಡಿಗಳಿದ್ದವು. ಈ ಬಾರಿ ಅನ್ನಪ್ರಸಾದ ವಿತರಣೆಯನ್ನು ಕೆರೆಯ ಬಳಿ ಸ್ಥಳಾಂತರಿಸಿರುವುದರಿಂದ ಹಿಂದಿದ್ದಲ್ಲಿ ವಿಶಾಲವಾದ ಜಾಗ ಲಭ್ಯವಾಗಿದ್ದು, ಅಲ್ಲಿ 110 ಹೆಚ್ಚುವರಿ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಇಲ್ಲಿ ಎಲ್ಲಾ ಬಡವರಿಗೂ ವ್ಯಾಪಾರಕ್ಕೆ ಅವಕಾಶ ಸಿಗಬೇಕೆಂಬ ನೆಲೆಯಲ್ಲಿ ಒಬ್ಬರಿಗೆ ಎರಡು ಅಂಗಡಿಗಳನ್ನು ಮಾತ್ರ ನಿಗದಿಪಡಿಸಲಾಗಿದೆ.
ಈ ಬಾರಿ ಸುಮಾರು 392 ಸ್ಟಾಲ್ಗಳಿಗೆ ಅವಕಾಶ ಮಾಡಿಕೊಡಲಾಗಿದ್ದು ಮೊದಲ ದಿನ ಅಂದಾಜು 40 ಸ್ಟಾಲ್‌ಗಳು ಮಾತ್ರ ಏಲಂಗೆ ಬಾಕಿಯಿದ್ದು ಆಸಕ್ತರು ತಕ್ಷಣ ದೇವಳದ ಕಚೇರಿಯನ್ನು ಸಂಪರ್ಕಿಸಬಹುದು.
