Annamalai : ತಮಿಳುನಾಡು ಬಿಜೆಪಿಯಲ್ಲಿ ಅಚ್ಚರಿ ಬೆಳವಣಿಗೆ ನಡೆದಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಅಣ್ಣಾಮಲೈ ಘೋಷಿಸಿದ್ದರು. ಇದೀಗ ಈ ಕುರಿತು ಅಣ್ಣಾಮಲೈ ಅವರು ಮೊದಲ ರಿಯಾಕ್ಷನ್ ಕೊಟ್ಟಿದ್ದಾರೆ.
ಹೌದು, ನಾನೊಬ್ಬ ಪಕ್ಷದ ಕಾರ್ಯಕರ್ತನಾಗಿದ್ದು, ಪಕ್ಷ ನನಗೆ ಏನೇ ಜವಾಬ್ದಾರಿ ನೀಡಿದರು, ಅದನ್ನು ನಿಭಾಯಿಸಿದ್ದೇನೆ. ಇನ್ನೊಂದು ಜವಾಬ್ದಾರಿ ಕೊಟ್ಟರು ಕೆಲಸ ಮಾಡುತ್ತೇನೆ’ ಎಂದು ಬಿಜೆಪಿ ಮುಖಂಡ ಅಣ್ಣಾಮಲೈ ಹೇಳಿದರು. ಅಲ್ಲದೆ ಇದೀಗ ತಮಿಳುನಾಡಿನಲ್ಲಿ ಚುನಾವಣೆ ಸಮೀಪಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮಿಳುನಾಡಿನ ವಿರೋಧ ಪಕ್ಷದ ನಾಯಕ ಪಳನಿ ಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಮೈತ್ರಿಯ ಬಗ್ಗೆಯೂ ಮಾತನಾಡಿದ್ದಾರೆ. ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸುವುದು ನಮ್ಮೆಲ್ಲರ ಉದ್ದೇಶ ಎಂದರು.
ರಾಜಕೀಯದಲ್ಲಿ ಅಧಿಕಾರಕ್ಕಿಂತ ತಾಳ್ಮೆ ಮುಖ್ಯ. ತಾಳ್ಮೆಯಿಂದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಒಂದಲ್ಲ ಒಂದು ದಿನ ಬಿಜೆಪಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಎಲ್ಲಿ ಇರಬೇಕು, ಯಾವ ಸ್ಥಾನದಲ್ಲಿರಬೇಕು ಎಂಬುದು ಪಕ್ಷಕ್ಕೆ ಗೊತ್ತಿದೆ ಎಂದರು.
ತಮಿಳುನಾಡು ರಾಜ್ಯದಲ್ಲಿ ಹಲವು ರಾಜಕೀಯ ಬೆಳವಣಿಗೆ ನಡೆಯುತ್ತಿದೆ. 2026ರ ವಿಧಾನಸಭೆ ಚುನಾವಣೆಗೆ ದಿ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಕಳೆದ ವಾರ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ನವದೆಹಲಿಯಲ್ಲಿ ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಭೇಟಿಯಾಗಿದ್ದರು. ಈ ಭೇಟಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿಯ ಕುರಿತು ಕುತೂಹಲ ಮೂಡಿಸಿದೆ.
ಅಂದಹಾಗೆ ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಎಐಎಡಿಎಂಕೆ ನಡುವಿನ ಮೈತ್ರಿ ಮಾತುಕತೆಗಳು ಅವರ ನಿರ್ಗಮನಕ್ಕೆ ಕಾರಣವಾಗಿದೆ ಎನ್ನಲಾಗಿದೆ. 2023ರಲ್ಲಿ ರಾಜಕೀಯ ಅಭಿಪ್ರಾಯಗಳು ಭಿನ್ನವಾದ ಕಾರಣ ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮುರಿದುಬಿದ್ದಿತ್ತು. ವರದಿಯಂತೆ ಇದಕ್ಕೆ ಮುಖ್ಯ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ. ಈಗ ಪುನಃ ಮೈತ್ರಿ ಮಾಡಿಕೊಳ್ಳಬೇಕಾದರೆ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದ್ದವು. ಇದೀಗ ಅಣ್ಣಾಮಲೈ ರಾಜೀನಾಮೆ ನೀಡುವುದಾಗಿ ಘೋಷಿಸುವ ಮೂಲಕ ಅದೆಲ್ಲವೂ ನಿಜವಾಗಿದೆ.
