Mangaluru : ‘ಮಂಗಳೂರು ಹಜ್ ಭವನ’ ನಿರ್ಮಾಣಕ್ಕಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸುಮಾರು 8 ಕೋಟಿ ರೂ. ಮೌಲ್ಯದ 1.80 ಎಕರೆ ಭೂಮಿ ದಾನ ಮಾಡಿದ್ದಾರೆ.
ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ ಸರಕಾರ 10 ಕೋಟಿ ರೂ. ಬಿಡುಗಡೆ ಮಾಡಿ ಕಾಯ್ದಿರಿಸಿತ್ತು. ಆದರೆ ಸೂಕ್ತ ನಿವೇಶನ ಸಿಗದಿದ್ದ ಕಾರಣ ಹಜ್ ಭವನ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಇನಾಯತ್ ಅಲಿ ಹಾಗೂ ಅವರ ಕುಟುಂಬ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಸುಮಾರು 1.80 ಎಕರೆ ಜಾಗವನ್ನು ಹಜ್ ಸಮಿತಿಗೆ ಹಸ್ತಾಂತರ ಮಾಡುವ ಮೂಲಕ ಮಾದರಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ
ಬುಧವಾರ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿಯವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇನಾಯತ್ ಅಲಿ ಕುಟುಂಬ ಮತ್ತು ರಾಜ್ಯ ಹಜ್ ಕಮಿಟಿಯ ಮುಖಂಡರು, ಅಧಿಕಾರಿಗಳು ಹಾಗೂ ಧಾರ್ಮಿಕ ಧರ್ಮಗುರುಗಳ ಸಮ್ಮುಖದಲ್ಲಿ ಹಜ್ ಭವನಕ್ಕಾಗಿ ದಾನರೂಪದಲ್ಲಿ ನೀಡುತ್ತಿರುವ ಜಾಗದ ದಾಖಲೆ ಪತ್ರಗಳಿಗೆ ಸಹಿ ಹಾಕಿ ಹಸ್ತಾಂತರಿಸಿದರು.
ಅಲ್ಲದೆ ಹಜ್ ಭವನ ನಿರ್ಮಾಣಕ್ಕಾಗಿ ಇನಾಯತ್ ಅಲಿ ಕುಟುಂಬ ತಿಂಗಳ ಹಿಂದೆಯೇ ಹಜ್ ಸಮಿತಿಯನ್ನು ಸಮೀಪಿಸಿ ನಿವೇಶನದ ದಾಖಲೆ ಪತ್ರಗಳನ್ನು ಪರಿಶೀಲಿಸಿತ್ತು. ಆ ಬಳಿಕ ಕರ್ನಾಟಕ ರಾಜ್ಯ ಹಜ್ ಕಮಿಟಿಯ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಟಿಪ್ಪುಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹರ್ಷ ವ್ಯಕ್ತಪಡಿಸಿದ್ದಲ್ಲದೆ, ಇನಾಯತ್ ಅಲಿ ಕುಟುಂಬಕ್ಕೆ ಧನ್ಯವಾದಗಳನ್ನೂ ಅರ್ಪಿಸಿದ್ದರು.
ಇದೀಗ ಹಜ್ ಭವನ ನಿರ್ಮಾಣಕ್ಕೆ ನಿವೇಶನ ದೊರೆತ ಹಿನ್ನಲೆಯಲ್ಲಿ ಎ.24ರಂದು ಕರಾವಳಿಗರ ಬಹುದಿನಗಳ ಕನಸಾಗಿರುವ ಹಜ್ ಭವನಕ್ಕೆ ಶಂಕು ಸ್ಥಾಪನೆ ನೆರವವೇರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಟಿಪ್ಪು ಮಾಹಿತಿ ನೀಡಿದ್ದಾರೆ.
