Mysore: ಪತ್ನಿ ಜೀವಂತವಾಗಿದ್ದರೂ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬ ಆರೋಪದಲ್ಲಿ ಆದಿವಾಸಿ ಸಮುದಾಯದ ಸುರೇಶ್ ಎಂಬಾತನ ವಿರುದ್ಧ ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿ ನ್ಯಾಯಾಲಯದ ದಿಕ್ಕು ತಪ್ಪಿಸಿ, ಶಿಕ್ಷೆಗೊಳಪಡಿಸಿದ ಪೊಲೀಸರಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಛೀಮಾರಿ ಹಾಕಿದೆ.
ಎ.23 ಕ್ಕೆ ತೀರ್ಪನ್ನು ಕಾದಿರಿಸಲಾಗಿದೆ. ಅಲ್ಲದೆ ಅಂದು ಸಂತ್ರಸ್ತನಾಗಿರುವ ಆರೋಪಿ ಸುರೇಶ್ ಕುಟುಂಬ, ಪ್ರಕರಣದ ತನಿಖಾಧಿಕಾರಿಗಳು ಹಾಜರಿರುವಂತೆ ಆದೇಶಿಸಿದರು.
ಕುಶಾಲನಗರದ ನಿವಾಸಿ ಮಲ್ಲಿಗೆ ಪ್ರಕರಣದಲ್ಲಿ ಕೋರ್ಟ್ ಪೊಲೀಸರಿಗೆ ಛೀಮಾರಿ ಹಾಕಿದೆ. ಪೊಲೀಸ್ ವ್ಯವಸ್ಥೆ ಕುರಿತು ಕಟು ಶಬ್ದಗಳ ಮೂಲಕ ತರಾಟೆಗೆ ತೆಗೆದುಕೊಳ್ಳಲಾಗಿದೆ.
ನಾಪತ್ತೆಗೊಂಡ ಮಹಿಳೆ ಸಾವಿಗೀಡಾಗಿದ್ದರೆ, 22 ದಿನಗಳಲ್ಲಿ ಆಕೆಯ ದೇಹ ಹೇಗೆ ಕೊಳೆಯಲು ಸಾಧ್ಯ? ನಾಯಿ, ನರಿ ಕಿತ್ತು ತಿಂದಿರುವ ಕುರಿತು ಸಂಶಯ ವ್ಯಕ್ತಪಡಿಸಿದ ರೀತಿ ದೋಷಾರೋಪ ಪಟ್ಟಿಯಲ್ಲಿದೆ. ಹಾಗಾದರೆ ದೇಹದ ಮೇಲಿನ ಬಟ್ಟೆ ಹಾಳಾಗದೆ ಶುಭ್ರಗೊಂಡಿರುವುದು ಹೇಗೆ? ತನಿಖಾಧಿಕಾರಿಗಳು ಚಾರ್ಜ್ಶೀಟನ್ನು ತಯಾರು ಮಾಡಿದ್ದಾರೋ ಅಥವಾ ಕಾನ್ಸ್ಟೇಬಲ್ಲೋ? ಇಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆ ಎನ್ನುವುದಕ್ಕಿಂತ ಇಡೀ ವ್ಯವಸ್ಥೆಯನ್ನೇ ವಿನಾಶ ಮಾಡಿದ್ದಾರೆ ಎನ್ನುವ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
ಮೃತಪಟ್ಟಿದ್ದಾಳೆ ಎನ್ನಲಾಗಿದ್ದ ಮಲ್ಲಿಗೆ ಎ.1ರಂದು ಮಡಿಕೇರಿಯ ಹೋಟೆಲ್ನಲ್ಲಿ ತನ್ನ ಪ್ರಿಯಕರನ ಜೊತೆ ಕಾಣಿಸಿಕೊಂಡಿದ್ದಳು. ನಂತರ ಆಕೆಯನ್ನು ವಶಕ್ಕೆ ಪಡೆದು ಕುಶಾಲನಗರ ಠಾಣೆಗೆ ಕಳುಹಿಸಲಾಗಿದೆ. ಈ ಎಲ್ಲಾ ಬೆಳವಣಿಗೆಯನ್ನು ಆರೋಪಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
