Terror Attack: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದ್ದು, ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ದೊಡ್ಡ ಕ್ರಮ ಕೈಗೊಂಡಿದೆ.
ಸಿಂಧು ನದಿ ನೀರು ಒಪ್ಪಂದವನ್ನು ನಿಲ್ಲಿಸುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಸಮಸ್ಯೆಯನ್ನು ಉಂಟು ಮಾಡಿದೆ. ಇನ್ನೊಂದು ಕಡೆ ಪಾಕಿಸ್ತಾನದ ರಾಯಭಾರ ಕಚೇರಿಯನ್ನು ಮುಚ್ಚುವ ನಿರ್ಧಾರ, 48 ಗಂಟೆಗಳ ಒಳಗೆ ಪಾಕಿಸ್ತಾನಿಗಳು ಭಾರತವನ್ನು ತೊರೆಯುವಂತೆ ಸೂಚನೆ ನೀಡಲಾಗಿದೆ. ಈ ಎಲ್ಲಾ ನಿರ್ಧಾರಗಳಿಂದ ಪಾಕಿಸ್ತಾನವು ಸಂಕಷ್ಟಕ್ಕೀಡಾಗಿದ್ದು, ಇದೀಗ ತುರ್ತಾಗಿ ಉನ್ನತ ಮಟ್ಟದ ಸಭೆ ಕರೆದಿದೆ.
ಭಾರತದ ಈ ಎಲ್ಲಾ ಕ್ರಮಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಗುರುವಾರ ಉನ್ನತ ನಾಗರಿಕ ಸಂಸ್ಥೆ ಸಭೆ ನಡೆಯಲಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬುಧವಾರ ತಡರಾತ್ರಿ ತಿಳಿಸಿದ್ದಾರೆ.
ಭಾರತದ ಕ್ರಮಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಈ ಸಭೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಖ್ವಾಜಾ ಆಸಿಫ್ ಹೇಳಿದ್ದಾರೆ. ಪಹಲ್ಗಾಮ್ ದಾಳಿಗೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ ಎಂದೂ ಹೇಳಿದ್ದಾರೆ.
