Shankaracharya Shri: ಪಹಲ್ಗಾಮ್ ಧಾಳಿ ಕುರಿತು ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಸರ್ವ ಪಕ್ಷ ಸಭೆಯನ್ನು ಕರೆದಿತ್ತು. ಈ ಬೆನ್ನಲ್ಲೇ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮೀಜಿಯವರು ಪ್ರಧಾನಿ ಮೋದಿಯವರನ್ನು ‘ಚೌಕಿದಾರ’ ಇಲ್ಲಿ ಎಂದು ಪ್ರಶ್ನಿಸಿದ್ದಾರೆ.
ಹೌದು, ಜ್ಯೋತಿರ್ಮಠದ ಶಂಕರಾಚಾರ್ಯ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಅವರು ಪ್ರಶ್ನೆ ಮಾಡಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು’ದೇಶದಲ್ಲಿ ಇಷ್ಟೊಂದು ದೊಡ್ಡ ದುರ್ಘಟನೆ ನಡೆದಿದೆ. ಚೌಕಿದಾರ ಎಲ್ಲಿ… ಚೌಕಿದಾರನನ್ನು ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದಿರುವ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
“ನಮ್ಮ ಮನೆಯಲ್ಲಿ ಯಾವುದೇ ದುರ್ಘಟನೆ ನಡೆದರೆ, ನಾವು ಮೊದಲು ಯಾರನ್ನು ಪ್ರಶ್ನೆ ಮಾಡುತ್ತೇವೆ. ಮೊದಲು ಹಿಡಿಯುವುದೇ ಸೆಕ್ಯೂರಿಟಿ (ಚೌಕಿದಾರ)ಯನ್ನು. ನೀನು ಎಲ್ಲಿದ್ದೆ ಎಂದು ಮೊದಲು ನಾವು ಚೌಕಿದಾರನನ್ನು ಪ್ರಶ್ನೆ ಮಾಡುತ್ತೇವೆ. ನೀನು ಇರುವುದು ಯಾಕೆ, ನೀನು ಇರುವಾಗ ಈ ರೀತಿ ಘಟನೆ ಯಾಕೆ ನಡೆಯಿತು ಎಂದು ಪ್ರಶ್ನೆ ಮಾಡುತ್ತೇವೆ” ಎಂದು ಪಿಟಿಐಗೆ ಹೇಳಿದ್ದಾರೆ.
ಅಲ್ಲದೆ’ ನಮ್ಮ ದೇಶದಲ್ಲಿ ಚೌಕಿದಾರನ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ಈಗ ನಾವು ಅವರಿಗೆ ಪಾಠ ಕಲಿಸುತ್ತೇವೆ. ಸದೆಬಡೆಯುತ್ತೇವೆ ಎಂದು ಹೇಳಲಾಗುತ್ತಿದೆ. ಅವರು ಪಾಕಿಸ್ತಾನದಿಂದ ಬಂದಿದ್ದರು ಅಂತ ಹೇಳುತ್ತಿದ್ದೀರಿ… ಇಷ್ಟು ಬೇಗ ಹೇಗೆ ಗೊತ್ತಾಯ್ತು ಅವರು ಪಾಕಿಸ್ತಾನದಿಂದ ಬಂದಿದ್ದು ಅಂತಾ. ಇಷ್ಟು ಬೇಗ ನಿಮಗೆ ಗೊತ್ತಾಗಿದ್ದೇ ಆದರೆ ಈ ಘಟನೆ ನಡೆಯುವುದಕ್ಕಿಂತ ಮುಂಚೆ ಯಾಕೆ ನಿಮಗೆ ಗೊತ್ತಾಗಲಿಲ್ಲ ಅಂತಲೂ ಅವರು ಪ್ರಶ್ನೆ ಮಾಡಿದ್ದಾರೆ.
ಪಾಕಿಸ್ತಾನದಿಂದ ಬಂದಿದ್ದಾರೆ ಎನ್ನುವುದು ನಿಮಗೆ ಖಚಿತವಾದರೆ, ಪಾಕಿಸ್ತಾನದ ಮೇಲೆ ಕಠಿಣ ಕ್ರಮ ಅಥವಾ ಪ್ರತಿಕ್ರಿಯೆ ನೀಡಿ. ನೀವು ಸಿಂಧೂ ನದಿ ನೀರನ್ನು ನಿಲ್ಲಿಸುತ್ತೇವೆ ಎಂದು ಹೇಳುತ್ತಿದ್ದೀರಿ. ನಿಮಗೆ ನೀರು ನಿಲ್ಲಿಸಲು ಅಥವಾ ನೀರು ಅಲ್ಲಿಗೆ ಹೋಗದಂತೆ ತಡೆಯುವುದಕ್ಕೆ ಯಾವುದೇ ಉಪಾಯವೇ ಇಲ್ಲ. ಪಾಕಿಸ್ತಾನಕ್ಕೆ ನೀರು ಹೋಗದಂತೆ ತಡೆಯುವುದಕ್ಕೆ ಈಗ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಡ್ಯಾಂ ಸೇರಿದಂತೆ ನೀರು ಹರಿದು ಹೋಗದಂತೆ ತಡೆಯುವುದಕ್ಕೆ ಏನಿಲ್ಲಾ ಎಂದಾದರೂ 20 ವರ್ಷಗಳೇ ಬೇಕು ಅಂತಲೇ ಹೇಳಲಾಗುತ್ತಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸುದ್ದಿ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಕೇಳದ ಪ್ರಶ್ನೆಯನ್ನು ಸ್ವಾಮೀಜಿ ಕೇಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
