Chitradurga : ಚಿತ್ರದುರ್ಗದ ಶಾಲೆ ಒಂದರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಬಾರಿ ಅಕ್ರಮ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ 10 ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಹೌದು, ಚಿತ್ರದುರ್ಗದ ವಾಸವಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ SSLC ಪರೀಕ್ಷೆಯ ವೇಳೆ ಗಂಭೀರ ಅಕ್ರಮ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ 10 ಶಿಕ್ಷಕರನ್ನು ಡಿಡಿಪಿಐ ಮಂಜುನಾಥ್ ಅವರು ಸಸ್ಪೆಂಡ್ ಮಾಡಿದ್ದಾರೆ.
ಅಂದಹಾಗೆ ವಾಸವಿ ಪ್ರೌಢಶಾಲೆಯಲ್ಲಿ ನಡೆದ SSLC ಪರೀಕ್ಷೆಯ ವೇಳೆ ಸಾಮೂಹಿಕ ಕಾಪಿ ಮಾಡಲಾಗಿದೆ ಎಂಬ ಮಾಹಿತಿ ದೊರೆತಿತ್ತು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಅನಧಿಕೃತ ಮಹಿಳೆಯೊಬ್ಬರು ಕೆಲವು ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿದ್ದು ಕಂಡುಬಂದಿದೆ. ಈ ಆಧಾರದ ಮೇಲೆ 10 ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಬಿಇಓ ಮತ್ತು ಡಿಡಿಪಿಐ ಇಬ್ಬರಿಗೂ ಶೋಕಾಸ್ ನೋಟೀಸ್ ನೀಡಲಾಗಿದೆ. ಜೊತೆಗೆ, ಸೆಂಟ್ರಲ್ ಚೀಫ್ ಸೂಪರಿಂಟೆಂಡೆಂಟ್ ಹಾಗೂ ಅಪರಿಚಿತ ಮಹಿಳೆ ವಿರುದ್ಧ ದೂರು ದಾಖಲಿಸಲಾಗಿದೆ. ಈ ಎಲ್ಲಾ ಮಾಹಿತಿಯನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕ್ರಮ ಕೈಗೊಂಡಿರುವ ಡಿಡಿಪಿಐ ಮಂಜುನಾಥ್ ಹಾಗೂ ಬಿಇಓ ನಾಗಭೂಷಣ್ ಇಬ್ಬರಿಗೂ ಶೋಕಾಸ್ ನೋಟೀಸ್ ಜಾರಿಗೊಳಿಸಲಾಗಿದೆ. ಕರ್ತವ್ಯ ಲೋಪ ಎಸಗಿದ ಶಿಕ್ಷಕರಾದ ಕೆಂಚಮೂರ್ತಿ, ರೋಷನ್ ಅರಾ, ಕವಿತಾ, ಶಿವಕುಮಾರ್, ರಂಗಮ್ಮ, ವಿಜಯಲಕ್ಷ್ಮಿ, ಉಮಾಪತಿ ಸೇರಿದಂತೆ ಹತ್ತು ಮಂದಿಯನ್ನು ಅಮಾನತುಗೊಳಿಸಲಾಗಿದೆ.
