Puttur: ಪುತ್ತೂರಿನ ಬೆಳಿಯೂರುಕಟ್ಟೆ ಸಮೀಪ ವೃದ್ಧರೊಬ್ಬರು ಪುತ್ತೂರು ಗ್ರಾಮಾಂತರ ಠಾಣೆಗೆ ಬಂದು ನನ್ನ ಪತ್ನಿಯನ್ನು ಮಗನೇ ಕೊಂದಿರುವುದಾಗಿ ದೂರು ನೀಡಿರುವ ಘಟನೆ ನಡೆದಿತ್ತು. ಕೂಡಲೇ ಪೊಲೀಸರು ಒಂದು ಕ್ಷಣ ಕೂಡಾ ವ್ಯರ್ಥ ಮಾಡದೆ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಠಾಣೆಯಿಂದ ಹೊರಡುವಾಗ ದಾರಿ ಮಧ್ಯೆ ಕೊಲೆ ನಡೆದಿದೆ ಎಂದು ಹೇಳಲಾದ ಅಕ್ಕಪಕ್ಕದವರಿಗೂ ಪೊಲೀಸರು ಕರೆ ಮಾಡಿದ್ದಾರೆ.
ಈ ವೇಳೆ ವ್ಯಕ್ತಿ ತನ್ನ ಪತ್ನಿಯ ಕೊಲೆಯಾಗಿದೆ ಎಂದು ಗಾಬರಿಯಿಂದ ಹೇಳಿರುವುದಾಗಿ ತಿಳಿಸಿದ್ದಾರೆ. ಆದರೆ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದಾಗ ಮಾತ್ರ ಅವರಿಗೆ ಕಂಡಿದ್ದು ವಿಚಿತ್ರ ವಿಷಯ.
ಘಟನಾ ಸ್ಥಳಕ್ಕೆ ಹೋಗಿ ಪೊಲೀಸರು ಮನೆ ಬಾಗಿಲು ತಟ್ಟಿದಾಗ ನಗುಮೊಗದಿಂದ ಸ್ವಾಗತ ಮಾಡಿದ್ದು ಬೇರಾರೂ ಅಲ್ಲ ಕೊಲೆಯಾಗಿದ್ದಾಳೆ ಎಂದ ಮಹಿಳೆ. ಪೊಲೀಸರಿಗೆ ಏನೆಂದು ತೋಚದೆ, ಏನಿದು? ಎಂದು ಕೇಳಿದಾಗ ಅಲ್ಲಿದ್ದ ಎಲ್ಲರ ಮುಖದಲ್ಲಿ ಗೊಂದಲ ಕಾಣಿಸಿದೆ. ಪೊಲೀಸರು ಮನೆಗೆ ಬಂದದ್ದನ್ನು ನೋಡಿ ದೂರು ನೀಡಿದ ವ್ಯಕ್ತಿಯ ಪುತ್ರ ಬಂದು ಎಲ್ಲರ ಗೊಂದವನ್ನು ನಿವಾರಣೆ ಮಾಡಿದ್ದಾನೆ.
ದೂರು ನೀಡಿದ ವ್ಯಕ್ತಿ ಕಳೆದ ಹಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಸೋಮವಾರ ರಾತ್ರಿ ಮಲಗಿದವರಿಗೆ ಮಗ ತಾಯಿಯನ್ನು ಕೊಂದ ಹಾಗೆ ಕನಸು ಬಿದ್ದಿದೆಯಂತೆ. ಬೆಳಿಗ್ಗೆ ಎದ್ದ ಮೇಲೆ ಕೂಡಾ ಅದನ್ನು ನಿಜ ಎಂದು ನಂಬಿ ಭಯಗೊಂಡು, ಇದೇ ಭಯದಲ್ಲಿ ಬೆಳಗ್ಗೆ ಎದ್ದ ಬಳಿಕ ಮನೆಯಲ್ಲಿ ಪತ್ನಿ ಇದ್ದಾಳ ಎಂದು ಗಮಿಸಲು ಹೋಗದೇ, ಪಕ್ಕದ ಮನೆಯವರ ಬಳಿ ಓಡಿಹೋಗಿ ʼ ಮಗ ತಾಯಿಯನ್ನು ಕೊಂದʼ ಎಂದು ಹೇಳಿದ್ದಾರೆ. ಗಾಬರಿಗೊಂಡ ನೆರೆಮನೆಯವರು ಆ ವ್ಯಕ್ತಿಯನ್ನು ಸಂಪ್ಯ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಕನಸು ಕಂಡು ಅದನ್ನು ನಿಜ ಎಂದು ಭಾವಿಸಿ ಹೀಗೆ ಮಾಡಿದ್ದಾರೆ ಎಂದು ಪೊಲೀಸರಲ್ಲಿ ಮಗ ಹೇಳಿದ್ದಾನೆ. ಸದ್ಯಕ್ಕೆ ಈ ಸುದ್ದಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
