K N Rajanna : ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಸಚಿವರ ಹನಿಟ್ರ್ಯಾಪ್ ಪ್ರಕರಣ ಬಾರಿ ಸದ್ದು ಮಾಡಿತ್ತು. ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ‘ರಾಜ್ಯದ ಜನತೆ ಎದುರು ನನ್ನ ಮೇಲೆ ಹನಿಟ್ರ್ಯಾಪ್ ಆಗಿದೆ. ಈ ಬಗ್ಗೆ ದೂರು ಕೊಡಲಿದ್ದು, ಉನ್ನತ ಮಟ್ಟದ ತನಿಖೆ ಆಗಬೇಕು’ ಎಂದು ಆಗ್ರಹಿಸಿದ್ದರು. ಇದೀಗ ರಾಜಣ್ಣ ಅವರು ತನ್ನ ಮನೆಗೆ ಹನಿ ಟ್ರ್ಯಾಪ್ ಮಾಡಲು ಬಂದ ಹುಡುಗಿ ತನ್ನೊಂದಿಗೆ ಹೇಗೆ ವರ್ತಿಸಿದಳು ಎಂಬುದನ್ನು ವಿವರಿಸಿದ್ದಾರೆ.
ಹನಿ ಟ್ರ್ಯಾಪ್ ವಿಚಾರವಾಗಿ ಇದೇ ಈಗ ತನಿಖೆ ನಡೆಯುತ್ತಿದ್ದು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್ ಅವರ ಸೂಚನೆ ಮೇರೆಗೆ ಸಿಐಡಿ ಅಧಿಕಾರಿಗಳು ಹನಿಟ್ರ್ಯಾಪ್ ಕೇಸ್ ವಿಚಾರಣೆ ನಡೆಸುತ್ತಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಈ ವೇಳೆ ತನಿಖಾಧಿಕಾರಿಗಳ ಮುಂದೆ ಸಚಿವ ರಾಜಣ್ಣ ಅವರು ಹಲವು ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಯುವತಿಯೊಬ್ಬಳು ಏನೋ ಪ್ರಮುಖ ವಿಚಾರ ಮಾತನಾಡಬೇಕು ಎಂದು ಸರ್ಕಾರಿ ನಿವಾಸಕ್ಕೆ ಬಂದಿದ್ದಳು. ಆಕೆ ಪ್ರಮುಖ ವಿಚಾರ ಎಂದಿದ್ದಕ್ಕೆ ಕ್ಯಾಬಿನ್ ಒಳಗೆ ಕರೆಸಿ ಮಾತನಾಡಿಸಿದೆ. ಆಗ ಇದ್ದಕ್ಕಿದ್ದಂತೆ ಆ ಯುವತಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದಳು. ನನ್ನ ಕೈಯನ್ನು ಹಿಡಿದು ಎಳೆಯಲು ಪ್ರಯತ್ನಿಸಿದಳು. ಆಗ ನಾನು ಕೂಡಲೇ ಆ ಯುವತಿ ಕೆನ್ನೆಗೆ ಬಾರಿಸಿ ಕಳುಹಿಸಿದೆ. ಅಸಭ್ಯವಾಗಿ ವರ್ತಿಸಿದ ಯುವತಿ ಅಂದು ನೀಲಿ ಬಣ್ಣ ಬಟ್ಟೆ ಧರಿಸಿದ್ದಳು. ಯುವತಿಯ ಮುಖ ಪರಿಚಯ ನನಗೆ ಇಲ್ಲ, ಸಿಐಡಿ ಹುಡುಕಿದರೆ ಆಕೆ ಸಿಗಬಹುದು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಅಲ್ಲದೆ ಜಯಮಹಲ್‌ನಲ್ಲಿರುವ ಸಚಿವರ ಸರ್ಕಾರಿ ನಿವಾಸಕ್ಕೆ ಎರಡು ಬಾರಿ ಬೇರೆ ಬೇರೆ ಯುವತಿಯರು ಬಂದಿದ್ರು, ಅವರಿಬ್ಬರ ಪರಿಚಯ ನನಗಿಲ್ಲ, ಅವರೊಂದಿಗೆ ಒಬ್ಬ ಗಡ್ಡಧಾರಿ ವ್ಯಕ್ತಿ ಕೂಡ ಬಂದಿದ್ದ. ಈ ಘಟನೆ ನಡೆದ ದಿನದಂದು ನಿವಾಸದಲ್ಲಿ ಕಾರ್ಯಕರ್ತರು ಕೂಡ ಇದ್ದರು. ಆದರೆ ಆ ಘಟನೆ ನಡೆದ ನಿಖರ ದಿನ ಯಾವಾಗ ಎಂದು ತಿಳಿಯುತ್ತಿಲ್ಲ ಎಂದು ರಾಜಣ್ಣ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
