Sonu Nigam: ಭಾರತದ ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ಕನ್ನಡವೆಂದರೆ ಬಲು ಪ್ರೀತಿ. ಸಾವಿರಾರು ಕನ್ನಡ ಹಾಡುಗಳನ್ನು ಹಾಡಿ ಕನ್ನಡಿಗರ ಮನ ಗೆದ್ದ ಗಾಯಕ ಇವರು. ಆದರೆ ಇದೀಗ ಕಾರ್ಯಕ್ರಮ ಒಂದರಲ್ಲಿ ಕನ್ನಡ ಹಾಡು ಹಾಡಲು ಬಂದ ಬೇಡಿಕೆಯನ್ನು ಪಹಲ್ಗಾಮ್ ದಾಳಿಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದಾರೆ.
ಹೌದು, ನಗರದ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನಲ್ಲಿ ಪ್ರದರ್ಶನ ನೀಡುತ್ತಿದ್ದ ಸೋನು ನಿಗಮ್ ಕನ್ನಡ ಹಾಡು ಎಂದ ಕನ್ನಡಿಗನಿಗೆ ಪಹಲ್ಗಾಮ್ ಉಗ್ರರ ದಾಳಿಯನ್ನು ಹೋಲಿಕೆ ಮಾಡಿ ನಾಲಿಗೆ ಹರಿಬಿಟ್ಟಿದ್ದಾರೆ. ಸೋನು ನಿಗಮ್ರ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಅಂದಹಾಗೆ ವೇದಿಕೆ ಏರಿದ ಸೋನು ನಿಗಮ್ ಸಾಲು ಸಾಲು ಹಿಂದಿ ಹಾಡನ್ನು ಹಾಡಿದ್ದರು. ಇದರಿಂದ ಬೇಸತ್ತ ಹಲವಾರು ವಿದ್ಯಾರ್ಥಿಗಳು ಕನ್ನಡ ಕನ್ನಡ ಎಂದು ಕಿರುಚಲಾರಂಭಿಸಿದರು. ಈ ಸಮಯದಲ್ಲಿ ಹಾಡನ್ನು ಅರ್ಧಕ್ಕೆ ನಿಲ್ಲಿಸಿದ ಸೋನು ನಿಗಮ್ ʼಪಹಲ್ಗಾಮ್ನಲ್ಲಿ ನಡೆದಘಟನೆಯ ಕಾರಣ ಇದೇ. ನಿಮ್ಮ ಮುಂದೆ ಯಾರು ನಿಂತಿದ್ದಾರೆ ಎಂದು ನೋಡಿ. ನಾನು ನಿಮ್ಮನ್ನು ನಿಜಕ್ಕೂ ಇಷ್ಟಪಡುತ್ತೇನೆʼ ಎಂದಿದ್ದಾರೆ.
ಹೀಗೆ ಸೋನು ನಿಗಮ್ ಕನ್ನಡ ಹಾಡು ಹಾಡಿ ಎಂದ ವಿದ್ಯಾರ್ಥಿಗೆ ಪಹಲ್ಗಾಮ್ ಉಗ್ರರ ದಾಳಿ ಹೋಲಿಕೆ ಮಾಡಿ ಮಾತನಾಡಿ ಇಷ್ಟು ದಿನಗಳವರೆಗೆ ಕನ್ನಡಿಗರಲ್ಲಿ ಸಂಪಾದಿಸಿದ್ದ ಗೌರವಕ್ಕೆ ಧಕ್ಕೆ ತಂದುಕೊಂಡಿದ್ದಾರೆ.
