Mangalore: ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಪಟ್ಟಂತೆ ದಕ್ಷಿಣಕನ್ನಡ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ.
ಮಂಗಳೂರಿನ ಕಿನ್ನಿಪದವು ಕ್ರಾಸ್ ಬಳಿ ಸುಹಾಸ್ ಶೆಟ್ಟಿ ಹಾಗೂ ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಮತ್ತು ಶಶಾಂಕ್ ಎಂಬುವವರು ಮೇ.1 ರಂದು ರಾತ್ರಿ 8.27 ರ ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಪಿಕಪ್ ಹಾಗೂ ಕಾರಿನಲ್ಲಿ ಬಂದವರು ಅಡ್ಡಗಟ್ಟಿದ್ದು, ಕೂಡಲೇ ವಾಹನದಿಂದ ಇಳಿದ ದುಷ್ಕರ್ಮಿಗಳು ಸುಹಾಸ್ ಶೆಟ್ಟಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಕೂಡಲೇ ಆತನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಸುಹಾಸ್ ಮೃತ ಪಟ್ಟಿದ್ದಾರೆ.
ಇಂದು ಜಿಲ್ಲೆಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ ಬಿಎನ್‌ಎಸ್ ಕಲಂ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಾಗಾಗಿ ಇಂದಿನಿಂದ ಮೇ.6 ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಕಮಿಷನರೇಟ್ ವ್ಯಾಪ್ತಿ ಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ದೊಣ್ಣೆ, ಕತ್ತಿ, ಕೋಲು, ಬಂದೂಕು, ಚಾಕು ಸೇರಿದಂತೆ ಮನುಷ್ಯರಿಗೆ ದೈಹಿಕವಾಗಿ ಹಲ್ಲೆ ಮಾಡುವಂತಹ ಯಾವುದೇ ರೀತಿಯ ಶಸ್ತ್ರಗಳನ್ನು ಒಯ್ಯುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ. ಆ್ಯಸಿಡ್ ಅಥವಾ ಸ್ಫೋಟಕಗಳನ್ನು ಒಯ್ಯುವಂತಿಲ್ಲ. ವ್ಯಕ್ತಿಗಳ ಪ್ರತಿಕೃತಿ ಸುಡುವಂತಿಲ್ಲ. ಕಲ್ಲುಗಳನ್ನು ಅಥವಾ ಕ್ಷಿಪಣಿಗಳನ್ನು ಎಸೆಯುವ ಸಾಧನಗಳನ್ನು ಒಯ್ಯುವುದನ್ನು, ಶೇಖರಿಸುವುದನ್ನನು ಅಥವಾ ತಯಾರಿಸುವುದನ್ನು ನಿಷೇಧಿಸಲಾಗಿದೆ.
ಸರ್ಕಾರಿ ಸಂಸ್ಥೆ ಅಥವಾ ಸಂಘಟನೆಗಳ ವಿರುದ್ಧ, ಕಾರ್ಯನಿರತ ಅಧಿಕಾರಿ ಅಥವಾ ಸಿಬ್ಬಂದಿಗಳ ವಿರುದ್ಧ ನಿಂದನಾತ್ಮಕ ಘೋಷಣೆ ಕೂಗುವುದನ್ನು ಭಾಷಣ ಮಾಡುವುದನ್ನು ಪ್ರತಿಭಟನೆ ನಡೆಸುವುದನ್ನು, ಅವಾಚ್ಯ ಶಬ್ದ ಬಳಸುವುದನ್ನು, ಪ್ರಚೋದನಾಕಾರಿ ಭಾಷಣ ಮಾಡುವುದನ್ನು, ಗಾಯನ ಮೊದಲಾದ ಚಟುವಟಿಕೆ ನಡೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
