NEET: ನಿನ್ನೆ ದಿನ ದೇಶಾದ್ಯಂತ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದಾರೆ. ಇದೇ ವೇಳೆ ಸುಮಾರು 72 ವಯಸ್ಸಿನ ಅಜ್ಜಿ ಒಬ್ಬರು ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದರು. ಸಾಮಾನ್ಯವಾಗಿ ನೋಡಿದವರೆಲ್ಲರೂ ಯಾರೋ ಪರೀಕ್ಷೆ ಬರೆಯಲು ಬಂದ ಮಕ್ಕಳ ಪೋಷಕರು ಇರಬಹುದು ಎಂದು ಭಾವಿಸಿದ್ದರು. ಆದರೆ ಎಷ್ಟು ಹೊತ್ತಾದರೂ ಆ ಅಜ್ಜಿ ಅಲ್ಲಿಂದ ಹೋಗಲೇ ಇಲ್ಲ. ಬಳಿಕ ಪರೀಕ್ಷೆಗೆ ಸಮಯವಾದಾಗ ಆ ಅಜ್ಜಿ ಹೊರಗಡೆ ಎಲ್ಲ ತಪಾಸಣೆಗಳನ್ನು ಎದುರಿಸಿ ಸೀದಾ ಬಂದು ಬೆಂಚಿನಲ್ಲಿ ಕೂತಾಗ ಒಳಗೆ ನೆರೆದಿದ್ದ ಎಲ್ಲಾ ನೀಟ್ ಅಭ್ಯರ್ಥಿಗಳಿಗೂ ಆಶ್ಚರ್ಯ. ಯಾಕೆಂದರೆ ಆ ಅಜ್ಜಿ ನೀಟ್ ಪರೀಕ್ಷೆ ಬರೆಯಲು ಅಲ್ಲಿ ಹಾಜರಾಗಿದ್ದರು.
ಹೌದು, ಕಾಕಿನಾಡದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವೆಂಕಟಲಕ್ಷ್ಮಿ ಎಂಬ 72 ವರ್ಷದ ಅಜ್ಜಿ ಒಬ್ಬರು ನೀಟ್ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆಯಲು ಬಂದ ಅವರ ಶಾಂತ ಆತ್ಮವಿಶ್ವಾಸ ಮತ್ತು ಸಂಯೋಜಿತ ನಡವಳಿಕೆ ಎದ್ದು ಕಾಣುತ್ತಿತ್ತು. ಸಾಧಾರಣ ಸಲ್ವಾರ್ ಕಮೀಜ್ ಧರಿಸಿ, ತನ್ನ ಪ್ರವೇಶ ಪತ್ರವನ್ನು ಮಾತ್ರ ಹೊತ್ತಿದ್ದ ಅವಳು ಇತರ ಪರೀಕ್ಷಾರ್ಥಿಗಳೊಂದಿಗೆ ಶಾಂತವಾಗಿ ತನ್ನ ಆಸನವನ್ನು ತೆಗೆದುಕೊಂಡಾಗ ಅನೇಕರನ್ನು ಬೆರಗುಗೊಳಿಸಿದಳು. ಕೊನೆಗೆ ಆ ಅಜ್ಜಿ ಎಲ್ಲರಂತೆ ಪರೀಕ್ಷೆ ಬರೆದು ಮರಳಿದ್ದಾರೆ.
