Mock Drill: ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ ನಡೆಸಲು ಭಾರತ ತಯಾರಾಗುತ್ತಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡಿದ ಸೂಚನೆಯಂತೆ ನಾಳೆ ದೇಶಾದ್ಯಂತ ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್ ನಡೆಯಲಿದೆ. ಹಾಗಂತ ಇದು ಯುದ್ಧದ ಮುನ್ಸೂಚನೆ ಅಲ್ಲ. ಯುದ್ಧಕ್ಕೆ ಸಿದ್ಧರಾಗಲು ನಾಗರಿಕರಿಗೆ ನೀಡುವ ತರಬೇತಿಯಾಗಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ(Mock Drill) ದೇಶಾದ್ಯಂತ ನಡೆಯಲಿದೆ. ಹಾಗಿದ್ರೆ ಈ ಮಾಕ್ ಡ್ರಿಲ್ ಎಂದರೇನು?
ಮಾಕ್ ಡ್ರಿಲ್ ಎಂದರೇನು?
ಮಾಕ್ ಡ್ರಿಲ್ ಎಂಬುದು ಕೃತಕವಾಗಿ ಸೃಷ್ಟಿಸಿದ ತುರ್ತು ಪರಿಸ್ಥಿತಿಯ ಸನ್ನಿವೇಶದಲ್ಲಿ ನಡೆಸುವ ತರಬೇತಿ ಅಥವಾ ಅಭ್ಯಾಸವಾಗಿದೆ. ಇದನ್ನು ಮುಖ್ಯವಾಗಿ ಯುದ್ಧ, ಭಯೋತ್ಪಾದಕ ದಾಳಿ, ನೈಸರ್ಗಿಕ ವಿಪತ್ತುಗಳು (ಭೂಕಂಪ, ಪ್ರವಾಹ, ಬೆಂಕಿ) ಅಥವಾ ಇತರ ತುರ್ತು ಸಂದರ್ಭಗಳಿಗೆ ಸಿದ್ಧತೆಯನ್ನು ಪರೀಕ್ಷಿಸಲು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಆಯೋಜಿಸಲಾಗುತ್ತದೆ. ಒಟ್ಟಿನಲ್ಲಿ ಯುದ್ಧದ ಪರಿಸ್ಥಿತಿ, ತುರ್ತು ಸಂದರ್ಭದಲ್ಲಿ ನಾಗರೀಕರು ಹೇಗೆ ವರ್ತಿಸಬೇಕು, ಏನು ಮಾಡಬೇಕು ಅನ್ನೋದ ಪ್ರಾತ್ಯಕ್ಷಿಕೆ ಇದಾಗಿದೆ.
ಹೇಗೆ ನಡೆಯುತ್ತೆ?
ಮಾಕ್ ಡ್ರಿಲ್ ನಲ್ಲಿ ಹಲವು ರೀತಿಯ ಚಟುವಟಿಕೆಗಳನ್ನು ಮಾಡಲಾಗುವುದು. ಇವುಗಳಲ್ಲಿ ವಾಯುದಾಳಿಯ ಎಚ್ಚರಿಕೆಗಳು ಎಷ್ಟು ಪರಿಣಾಮಕಾರಿ ಎಂದು ತಿಳಿದುಕೊಳ್ಳುವುದು, ನಿಯಂತ್ರಣ ಕೊಠಡಿಯ ಕಾರ್ಯನಿರ್ವಹಣೆಯನ್ನು ಗಮನಿಸುವುದು ಮತ್ತು ದಾಳಿಯ ಸಮಯದಲ್ಲಿ ಹೇಗೆ ಕೆಲಸ ಮಾಡಬೇಕೆಂದು ಸಾಮಾನ್ಯ ಜನರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಾಗಿದೆ. ಅಲ್ಲದೆ ಯುದ್ಧ ಸಂದರ್ಭ, ಜನರ ಸಹಕಾರ, ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮ, ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸಬೇಕಾದ ರೀತಿ ಸೇರಿದಂತೆ ಹಲವು ವಿಚಾರಗಳನ್ನು ಈ ಮಾಕ್ ಡ್ರಿಲ್ ಮೂಲಕ ಜಾಗೃತಿ ನೀಡಲಾಗುತ್ತದೆ.
ಏನಲ್ಲಾ ಅನುಕರಣೆ ಮಾಡಲಾಗುತ್ತದೆ?
ವಿದ್ಯುತ್ ಕಡಿತ
ವೈಮಾನಿಕ ದಾಳಿ ಸೈರನ್‌ಗಳು
ಸ್ಥಳಾಂತರಿಸುವ ಎಚ್ಚರಿಕೆಗಳು
ತುರ್ತು ಸಂವಹನ ಸ್ಥಗಿತಗಳು
ಆಶ್ರಯ ಪಡೆಯುವ ಪ್ರೋಟೋಕಾಲ್‌ಗಳು
ನಾಗರಿಕ ರಕ್ಷಣಾ ಡ್ರಿಲ್‌ನಲ್ಲಿ ಯಾರು ಭಾಗವಹಿಸುತ್ತಾರೆ?
ಸಮನ್ವಯಕ್ಕಾಗಿ ಜಿಲ್ಲಾಡಳಿತಗಳು
ಹೋಮ್ ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್ ವಾರ್ಡನ್‌ಗಳು
ಸಮುದಾಯದ ಪ್ರಚಾರ ಮತ್ತು ಬೆಂಬಲಕ್ಕಾಗಿ NCC, NSS, NYKS ಮತ್ತು ವಿದ್ಯಾರ್ಥಿಗಳು
ಅರೆಸೈನಿಕ ಮತ್ತು ಪೊಲೀಸ್ ಪಡೆಗಳು
ಮಾಕ್ ಡ್ರಿಲ್ ವೇಳೆ ಏನೆಲ್ಲ ನಡೆಯುತ್ತೆ..?
* ಅಣಕು ಕವಾಯತಿನ ಅಡಿಯಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳನ್ನು ನಿರ್ವಹಿಸಲಾಗುತ್ತದೆ. ಇದು ಪ್ರಮುಖ ಅಪಾಯ ಮತ್ತು ಶತ್ರು ಚಟುವಟಿಕೆಗಳ ಕುರಿತು ಎಚ್ಚರಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ಒಂದು ಹಂತವಾಗಿದೆ.
* ಸಂಭವನೀಯ ದಾಳಿಗಳ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ನಾಗರಿಕ ರಕ್ಷಣಾ ತಂತ್ರಗಳಲ್ಲಿ ತರಬೇತಿ ನೀಡಲಾಗುವುದು.
* ಅಪಘಾತ ತಡೆಗಟ್ಟುವ ವ್ಯವಸ್ಥೆಗಳನ್ನು ಮಾಡಲಾಗುವುದು. ಇದರ ಅಡಿಯಲ್ಲಿ, ಶತ್ರುಗಳ ವೈಮಾನಿಕ ಕಣ್ಗಾವಲು ಅಥವಾ ದಾಳಿಯಿಂದ ನಗರಗಳು ಮತ್ತು ರಚನೆಗಳನ್ನು ಮರೆಮಾಡಲು ತುರ್ತು ಪ್ರೋಟೋಕಾಲ್‌ಗಳನ್ನು ಅಳವಡಿಸಲಾಗುತ್ತದೆ.
54 ವರ್ಷದ ಬಳಿಕ ಮಾಕ್ ಡ್ರಿಲ್!
1971ರ ನಂತರ ಅಂದ್ರೆ 54 ವರ್ಷದ ಬಳಿಕ ದೇಶದಲ್ಲಿ ರಕ್ಷಣಾ ಮಾಕ್ ಡ್ರಿಲ್ ನಡೆಸಲು ಕೇಂದ್ರ ಸರ್ಕಾರ ಸೂಚನೆ ನೀಡಿರುವುದು ವಿಶೇಷವಾಗಿದೆ. ಪ್ರಮುಖವಾಗಿ ಕೇಂದ್ರ ಸರ್ಕಾರದಿಂದ ಉತ್ತರ ಭಾರತದ ರಾಜ್ಯಗಳಿಗೆ ಈ ಸೂಚನೆ ನೀಡಲಾಗಿದೆ. 1971ರಲ್ಲಿ ಭಾರತ, ಪಾಕಿಸ್ತಾನ ನಡುವೆ ಯುದ್ಧ ನಡೆದಾಗ ಈ ರಕ್ಷಣಾ ಮಾಕ್ ಡ್ರಿಲ್ ನಡೆಸಲಾಗಿತ್ತು. ಆದಾದ ಬಳಿಕ ಎಂದೂ ಕೂಡ ದೇಶದಲ್ಲಿ ರಕ್ಷಣಾ ಮಾಕ್ ಡ್ರಿಲ್ ನಡೆಸಿಲ್ಲ. ಕಾರ್ಗಿಲ್ ಯುದ್ಧದ ವೇಳೆಯೂ ಮಾಕ್ ಡ್ರಿಲ್ ನಡೆಸಿರಲಿಲ್ಲ. ಪಹಲ್ಗಾಮ್ ನರಮೇಧದ ಬಳಿಕ ಭಾರತದ ಪ್ರತೀಕಾರದ ದಾಳಿಯ ಬಳಿಕ ಪಾಕ್ ಕೂಡ ಪ್ರತಿದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ರಕ್ಷಣಾ ಮಾಕ್ ಡ್ರಿಲ್‌ಗೆ ಕೇಂದ್ರದಿಂದ ಸೂಚನೆ ಸಿಕ್ಕಿದೆ.
