Mangalore: ಸುಹಾಸ್ ಶೆಟ್ಟಿ ಹತ್ಯೆ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀಕಾರದ ಕಿಚ್ಚು ಯಾವಾಗ ಭುಗಿಲೇಳುತ್ತೋ ಗೊತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ಬಿಗಿ ಭದ್ರತೆ ವ್ಯವಸ್ಥೆಯನ್ನು ಮಾಡಿದ್ದಾರೆ. ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್ ಹಾಕುವವರು, ಶೇರ್ ಮಾಡುವವರನ್ನು ಕೂಡಾ ಬಿಡದೇ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತಿದೆ.
ಇಷ್ಟೆಲ್ಲ ಕಟ್ಟುನಿಟ್ಟಿನ ನಡುವೆ ಸುಹಾಸ್ ಶೆಟ್ಟಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪ್ರತೀಕಾರದ ಕಿಚ್ಚು ಹಚ್ಚುವ ಹೇಳಿಕೆಯೊಂದನ್ನು ಭರತ್ ಕುಮ್ಡೇಲು ಮಾತನಾಡಿದ್ದಾರೆ. ಹಾಗಾಗಿ ಹಿಂದೂಪುರ ಮುಖಂಡನ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲು ಮಾಡಿಕೊಂಡಿದ್ದಾರೆ.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಜೈನ ಭವನದಲ್ಲಿ ನಡೆದ ಸುಹಾಸ್ ಶೆಟ್ಟಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಡೆದಿದೆ. ಸುಹಾಸ್‌ನನ್ನು ಯಾವ ರೀತಿ ಹತ್ಯೆ ಮಾಡಿದ್ರೋ ಅವರನ್ನು ಕೂಡಾ ಅದೇ ರೀತಿಯ ಹತ್ಯೆ ನಡೆಯಬೇಕು. ಎಲ್ಲವನ್ನೂ ಹಿಂದೂ ಸಮಾಜ ಸಹಿಸಿ ಕುಳಿತುಕೊಳ್ಳಲು ಇದು ಕಾಶ್ಮೀರವಲ್ಲ, ಮಂಗಳೂರು. ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ, ಮಹಿಳೆಯರ ಅತ್ಯಾಚಾರ ನಡೆಸಿದರೂ ಸಹಿಸಿ ಕೂರಬೇಕಾದ ಪರಿಸ್ಥಿತಿ ಇದೆ. ಆದರೆ ಮಂಗಳೂರಿನಲ್ಲಿ ಇದು ನಡೆಯಲ್ಲ. ಸುಹಾಸ್ ಹತ್ಯೆ ಪ್ರಕರಣದಲ್ಲಿ ಸ್ಪೀಕರ ಯು ಟಿ ಖಾದರ್ ಅವರನ್ನು ಪೊಲೀಸರು ತನಿಖೆ ಮಾಡಬೇಕು. ಅವರಿಗೆ ಈ ಹತ್ಯೆ ನಡೆಯುವ ವಿಚಾರ ಮೊದಲೇ ತಿಳಿದಿತು ಎಂದು ಭರತ್ ಕುಮ್ಡೇಲು ಆರೋಪ ಮಾಡಿದ್ದಾರೆ.
