Mangalore: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ರಕ್ತದೋಕುಳಿ ಹರಿದಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿಗೆ ಬಂದಾಗಲೇ ದುಷ್ಕರ್ಮಿಗಳು ಬಂಟ್ವಾಳ ತಾಲೂಕಿನ ಅಕ್ಕರಂಗಡಿ ಬಳಿ ವ್ಯಕ್ತಿಯೋರ್ವನ ಮೇಲೆ ತಲ್ವಾರ್‌ನಿಂದ ದಾಳಿ ಮಾಡಿದೆ. ಸ್ಥಳೀಯ ನಿವಾಸಿ ಹಮೀದ್ ಹಲ್ಲೆಗೊಳಗಾದ ವ್ಯಕ್ತಿ.
ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಅಕ್ಕರಂಗಡಿ ನಿವಾಸಿ ಪೈಂಟಿಂಗ್ ಕೆಲಸ ಮಾಡುತ್ತಿರುವ ಹಮೀದ್ ಯಾನೆ ಅಮ್ಮಿ ರಸ್ತೆ ಬದಿಯಲ್ಲಿ ನಿಂತ ಸಂದರ್ಭದಲ್ಲಿ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಈ ಕೃತ್ಯ ಮಾಡಿದ್ದಾರೆ. ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ಮೂಲಗಳ ಪ್ರಕಾರ ಒಂದೇ ಕೋಮಿಗೆ ಸಂಬಂಧಿಸಿದ ವಿಚಾರದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಕುರಿತು ಯಾವುದೇ ವಿಚಾರ ಸ್ಪಷ್ಟಗೊಂಡಿಲ್ಲ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎನ್ನುವ ಸುದ್ದಿ ಹರಡಿದೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ. ಸದ್ಯಕ್ಕೆ ಹಮೀದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ ಎಂದು ವರದಿಯಾಗಿದೆ.
