Koppa: ಕೊಪ್ಪ (Koppa) ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀಹರ್ಷ ಹರಿಹರಪುರ ಇವರು ತಮ್ಮ ಜಮೀನಿನ ತೋಟದ ಸಮೀಪದಲ್ಲಿದ್ದ ಸ್ಮಾರಕ ಶಿಲ್ಪದ ಮಾಹಿತಿಯನ್ನು ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಅವರಿಗೆ ತಿಳಿಸಿರುತ್ತಾರೆ.
ಈ ಸ್ಮಾರಕ ಶಿಲ್ಪದ ಅಧ್ಯಯನ ಮಾಡಿದ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಅವರು ಇದೊಂದು ವೀರಗಲ್ಲು ಎಂದು ಹಾಗೂ ಇದು ಸುಮಾರು 15-16ನೇ ಶತಮಾನಕ್ಕೆ ಸೇರಿರಬಹುದೆಂದು ಅಭಿಪ್ರಾಯ ಪಟ್ಟಿರುತ್ತಾರೆ. ಗ್ರಾನೈಟ್ ಶಿಲೆಯಲ್ಲಿ ಕೆತ್ತಲ್ಪಟ್ಟಿರುವ ಈ ವೀರಗಲ್ಲು 5 ಅಡಿ ಎತ್ತರ 2 ಅಡಿ ಅಗಲವಾಗಿದ್ದು, ನಾಲ್ಕು ಪಟ್ಟಿಕೆಗಳನ್ನು ಹೊಂದಿದೆ. ಈ ವೀರಗಲ್ಲಿನ ವಿಶೇಷತೆ ಎಂದರೆ ಒಂದೇ ವೀರಗಲ್ಲಿನಲ್ಲಿ ಇಬ್ಬರು ವೀರರು ಯುದ್ಧದಲ್ಲಿ ಹೋರಾಡಿ ಮಡಿದ ಕೆತ್ತನೆಯನ್ನು ತೋರಿಸಿರುವುದು.
ಮೊದಲ ಪಟ್ಟಿಕೆಯಲ್ಲಿ ವೀರರಿಬ್ಬರು ಕತ್ತಿ ಗುರಾಣಿ ಹಾಗೂ ಬಿಲ್ಲು ಬಾಣದ ಮೂಲಕ ಹೋರಾಟ ಮಾಡುವ ದೃಶ್ಯವಿದ್ದರೆ, ಎರಡನೆಯ ಪಟ್ಟಿಕೆಯಲ್ಲಿ ಅಶ್ವದ ಮೇಲೆ ಕುಳಿತು ವೀರರು ಹೋರಾಟ ಮಾಡುವ ದೃಶ್ಯವಿದೆ. ನಂತರದ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಹೋರಾಡಿ ಮರಣ ಹೊಂದಿದ ಈ ಇಬ್ಬರು ವೀರರನ್ನು ಎರಡು ಪ್ರತ್ಯೇಕ ಎರಡು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ಶಿಲ್ಪಗಳನ್ನು ಕೆತ್ತಲಾಗಿದೆ. ಕೊನೆಯ ಪಟ್ಟಿಕೆಯಲ್ಲಿ ಗಜಗಳು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಕೆತ್ತನೆಯಿದ್ದು ಮೇಲ್ಭಾಗದಲ್ಲಿ ಕೀರ್ತಿಮುಖದ ಜೊತೆಗೆ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಕೆತ್ತನೆಯನ್ನು ಮಾಡಲಾಗಿದೆ. ಅಧ್ಯಯನ ದೃಷ್ಟಿಯಿಂದ ಈ ವೀರಗಲ್ಲು ಪ್ರಮುಖವಾದ ಮಾಹಿತಿಯನ್ನು ನೀಡುತ್ತದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯ ಪಟ್ಟಿರುತ್ತಾರೆ.
