ಶಿವಮೊಗ್ಗ: ತಮನ್ನಾರನ್ನ ಮಾರ್ಕೆಟಿಂಗ್ ಸ್ಟ್ರ್ಯಾಟಜಿಗಾಗಿ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯನ್ನಾಗಿ ಮಾಡಿದ್ದಾರೆ. ಒಂದು ವೇಳೆ ತಮ್ಮನ್ನಾರನ್ನ ವಿರೋಧಿಸುವುದಾದ್ರೆ ಅವರ ಚಿತ್ರಗಳನ್ನು ನೀವು ನೋಡಬೇಡಿ ಅಂತ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಅವರು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯನ್ನಾಗಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ಸಮರ್ಥಿಸಿಕೊಂಡಿದ್ದಾರೆ. ಈ ಸಂದರ್ಭ ಶಿಕ್ಷಕರಿಗೆ 2,000 ಹೆಚ್ಚುವರಿ ಸಂಬಳ ನೀಡುವುದಾಗಿ ಪ್ರಕಟಿಸಿದ್ದಾರೆ.
ಯಾವ ವಿಷಯವಿದ್ದರೂ ಟೀಕೆಗಳು ಇದ್ದೇ ಇರುತ್ತದೆ. ಬಹುಶಃ ಮಾರ್ಕೆಟಿಂಗ್ ಸ್ಟ್ರ್ಯಾಟಜಿಗಾಗಿ ಈ ರೀತಿ ಮಾಡಿರಬಹುದು. ಒಂದು ವೇಳೆ ತಮ್ಮನ್ನಾರನ್ನು ವಿರೋಧಿಸುವುದಾದ್ರೆ ಅವರ ಚಿತ್ರಗಳನ್ನು ನೀವು ನೋಡಬೇಡಿ. ತಮನ್ನಾ ನಟ ಶಿವರಾಜ್ ಕುಮಾರ್ ಜತೆ ತಮಿಳಿನ ʻಜೈಲರ್ʼ ಸಿನಿಮಾದಲ್ಲಿ ನಟಿಸಿಲ್ಲವೇ? ಕೆಎಸ್‌ಡಿಎಲ್ ಒಂದು ಸಾರ್ವಜನಿಕ ಸ್ವತಂತ್ರ ಸಂಸ್ಥೆಯಾಗಿ ಅದಕ್ಕೆ ತನ್ನದೇ ನಿರ್ಧಾರ ಕೈಗೊಳ್ಳುವ ಹಕ್ಕು ಇದೆ. ಪ್ರತಿಯೊಂದರಲ್ಲೂ ತಪ್ಪು ಹುಡುಕೋದು ಸರಿಯಲ್ಲ. ಅವರು ಎಲ್ಲಾ ರೀತಿಯಲ್ಲಿ ಯೋಚಿಸಿ ಸೂಕ್ತ ನಿರ್ಧಾರ ಕೈಗೊಂಡಿರುತ್ತಾರೆ. ಎಲ್ಲದರಲ್ಲೂ ತಪ್ಪು ಹುಡುಕುವ ಚಾಳಿ ಇದ್ದರೆ ಅದನ್ನು ರಿಪೇರಿ ಮಾಡಲು ಆಗುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ 51 ಸಾವಿರ ಶಿಕ್ಷಕರಿಗೆ 2,000 ಹೆಚ್ಚಿನ ವೇತನ
ರಾಜ್ಯದಲ್ಲಿ ನೇಮಕ ಆಗಲಿರುವ 51 ಸಾವಿರ ಶಿಕ್ಷಕರ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿ, ಹಿಂದಿನ ಸರ್ಕಾರಗಳು ಈ ವಿಷಯದಲ್ಲಿ ತಡವಾಗಿ ಕ್ರಮ ಕೈಗೊಳ್ಳುತ್ತಿದ್ದವು. ಏಕೆಂದರೆ ಒಂದು ತಿಂಗಳ ವಿಳಂಬವಾಗಿ ನೇಮಕ ಮಾಡಿದರೂ ಸರ್ಕಾರಕ್ಕೆ ಭಾರೀ ಉಳಿತಾಯವಾಗುತ್ತಿತ್ತು. ಆದರೆ, ಸಿದ್ದರಾಮಯ್ಯ ಅವರ ಸರ್ಕಾರದ ಬೊಕ್ಕಸ ಭರ್ತಿಯಾಗಿದೆ. ಹಾಗಾಗಿ 51 ಸಾವಿರ ಶಿಕ್ಷಕರ ನೇಮಕ ಮಾಡಿದ್ದೇವೆ. ಇದೇ ಮೇ 29, 30 ರಂದು ಶಾಲೆ ಆರಂಭವಾಗಲಿದೆ.
ಶಿಕ್ಷಕರ ನೇಮಕಾತಿ ಸಂದರ್ಭ ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಈ 51 ಸಾವಿರ ಶಿಕ್ಷಕರಿಗೂ ನಾವು ಈ ವರ್ಷದಿಂದ 2,000 ಸೇರಿಸಿ ಕೊಡುತ್ತಿದ್ದೇವೆ. ಸಿದ್ದರಾಮಯ್ಯ ಸರ್ಕಾರದ ಖಜಾನೆ ಭರ್ತಿ ಆಗಿರುವುದರಿಂದ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
