CM-DCM War: ಸಿಎಂ ಸಿದ್ದರಾಮಯ್ಯ ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್ ಗಳನ್ನು, ಡಿಕೆ ಶಿವಕುಮಾರ್ ಅವರ ಅನುಮತಿ ಇಲ್ಲದೆ ವರ್ಗಾವಣೆ ಮಾಡಿ ಮನಸ್ತಾಪಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಇಲಾಖೆಯ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಿಟ್ಟಾಗಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಹೌದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯ ಮತ್ತೆ ಜೋರಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಜಲಸಂಪನ್ಮೂಲ ಇಲಾಖೆಗೆ ಹಿರಿಯ ಇಂಜಿನಿಯರ್ಗಳ ವರ್ಗಾವಣೆ ವಿಚಾರಕ್ಕೆ ಸಿಎಂ ಡಿಸಿಎಂ ನಡುವೆ ಮನಸ್ಥಾಪವಾಗಿದೆ. ಡಿಕೆ ಶಿವಕುಮಾರ್ ತಮ್ಮ ಇಲಾಖೆಗೆ ಸಂಬಂಧಿಸಿದ ವರ್ಗಾವಣೆಗಳಲ್ಲಿ ಸಿಎಂ ಅವರ ಮಧ್ಯಪ್ರವೇಶವನ್ನು ವಿರೋಧಿಸಿದ್ದು, ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಇಲಾಖೆಗೆ ಸಂಬಂಧಿಸಿದಂತೆ ವರ್ಗಾವಣೆ, ನೇಮಕಾತಿ ಮುಂತಾದ ವಿಚಾರಗಳ ಬಗ್ಗೆ ಆದೇಶ ಹೊರಡಿಸುವ ಮೊದಲು ನನ್ನ ಪೂರ್ವಾನುಮತಿ ಪಡೆಯಲೇಬೇಕು ಎಂದು ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಟಿಪ್ಪಣಿಯ ಮೂಲಕ ಮುಖ್ಯ ಕಾರ್ಯದರ್ಶಿಗೆ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದರು. ಆ ಸೂಚನೆಯನ್ನು ಉಲ್ಲಂಘಿಸಿ ಈ ಆದೇಶ ಹೊರಡಿಸಿರುವುದು ಶಿವಕುಮಾರ್ ಅವರನ್ನು ಕೆರಳಿಸಿದೆ ಎನ್ನಲಾಗಿದೆ.
ಇನ್ನು ಸಿಎಂ ಸಿದ್ಧರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಅಧಿಕಾರ ಹಸ್ತಾಂತರದ ಘಳಿಗೆ ಹತ್ತಿರ ಬರುತ್ತಿದ್ದಂತೆ ವಿಸ್ಪೋಟವಾಗುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಕಾಣುತ್ತಿದ್ದು, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರ ಕಾಂಗ್ರೆಸ್ ಸರ್ಕಾರದ ಆಂತರಿಕ ಸಂಘರ್ಷಕ್ಕೆ ಪುಷ್ಟಿ ನೀಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
