Kamal Haasan: ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬೆನ್ನಲ್ಲೇ ಕರ್ನಾಟಕದಾದ್ಯಂತ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿತ್ತು. ಆದರೆ ಕಮಲ್ ಹಾಸನ್ ಮಾತ್ರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಅವರ ‘ಥಗ್ ಲೈಫ್’ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಒಂದು ವೇಳೆ ಚಿತ್ರ ರಿಲೀಸ್ ಮಾಡಿದರೆ ಇಡೀ ಚಿತ್ರಮಂದಿರವನ್ನು ಸುಟ್ಟು ಹಾಕುವುದಾಗಿ ಹಾಗೂ ಬೆಂಗಳೂರನ್ನು ಬಂದ್ ಮಾಡುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ನೀವು ಏನೇ ತಿಪ್ಪರಲಾಗ ಹಾಕಿದರೂ ಕೂಡ ನಾನು ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರುತ್ತಿರುವ ಕಮಲ್ ಹಾಸನ್ ಇದೀಗ ದಿಕ್ಕು ತೋಚದೆ, ತಮ್ಮ ಚಿತ್ರದ ಪರವಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ‘ಥಗ್ ಲೈಫ್’ ( Thug Life) ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಚಲನಚಿತ್ರ ಮಂಡಳಿ ಎಚ್ಚರಿಸಿದ ನಂತರ, ನಟ ಇದೀಗ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಬರೋಬ್ಬರಿ 300 ಕೋಟಿ ಬಜೆಟ್ನಲ್ಲಿ ಸೆಟ್ಟೇರಿರುವ ಈ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅನುಮತಿ ಸಿಕ್ಕಿಲ್ಲ. ಇದೀಗ ನಟ ಕಾನೂನಿನ ಮೊರೆ ಹೋಗಿದ್ದಾರೆ. ಇದೀಗ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೊಳಪಡಿಸಿದೆ. ಮೊದಲು ಕನ್ನಡಿಗರ ಕ್ಷಮೆ ಕೇಳಿ ಬಳಿಕ ಅರ್ಜಿ ವಿಚಾರಣೆ ನಡೆಸುತ್ತೇವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೌದು, ಕಮಲ್ ಹಾಸನ್ ಯಾರೇ ಇರಲಿ ನೆಲ ಜಲ ವಿಚಾರದಲ್ಲಿ ರಾಜಿ ಇಲ್ಲ ಎಂದು ಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾ.ನಾಗ ಪ್ರಸನ್ನ ಯಾವುದೋ ಭಾಷೆಯಿಂದ ಕನ್ನಡ ಹುಟ್ಟಿದೆ ಎಂದರೆ ಹೇಗೆ? ಇಂದಿನ ಪರಿಸ್ಥಿತಿಗೆ ಕಮಲ್ ಹಾಸನ್ ನೇರ ಕಾರಣ. ಮೊದಲು ಆ ಬಗ್ಗೆ ಕ್ಷಮೆ ಕೇಳಿ. ಬಳಿಕ ನಿಮ್ಮ ಅರ್ಜಿಯನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಸಿನಿಮಾ ಬಿಡುಗಡೆಗೆ ತೊಂದರೆ ಆಗುತ್ತದೆ ಎಂದು ಅರ್ಜಿ ಹಾಕಿದ್ದೀರಾ. ನನಗೆ ತಲೆಯಲ್ಲಿ ಬುದ್ದಿ ಇಲ್ಲದೇ ಆ ರೀತಿ ಮಾತನಾಡಿದೆ ಎಂದು ಕನ್ನಡಿಗರ ಕ್ಷಮೆ ಕೇಳಿ . ಈ ಹಿಂದೆ ರಾಜಗೋಪಾಲಾಚಾರಿ ಕ್ಷಮೆ ಕೇಳಿದ್ದರು. ಬಳಿಕ ಪರಿಸ್ಥಿತಿ ತಣ್ಣಗಾಯ್ತು ಎಂದು ನ್ಯಾಯಮೂರ್ತಿ ಕಮಲ್ ಹಾಸನ್ ಅವರ ಮುಖದಲ್ಲಿ ನೀರಿಳಿಸಿದ್ದಾರೆ.
ಈ ಮೂಲಕ ಹೈಕೋರ್ಟ್ ಕನ್ನಡಿಗರ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿರುವುದಲ್ಲದೇ, ತಮಿಳು ಪಾರಮ್ಯ ಮೆರೆಯುತ್ತಿರುವ ಭಾಷಾಂಧರ ಸುಳ್ಳು ಪ್ರತಿಷ್ಠೆಯನ್ನು ತೊಡೆದುಹಾಕಿದೆ
