Livein Partner Murder: ಲಿವ್ ಇನ್ ಸಂಬಂಧದಲ್ಲಿ ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಆಕೆಯ ಪಾರ್ಟ್ನರ್ ಕೊಲೆ ಮಾಡಿರುವ ಘಟನೆ ಕೊಲ್ಹಾಪುರದ ಸರ್ನೋಬತ್‌ವಾಡಿಯಲ್ಲಿ ನಡೆದಿದೆ.
ಸಮೀಕ್ಷಾ ಭರತ್ ನರಸಿಂಗ ಅಲಿಯಾಸ್ ಬಾಗ್ಡಿ ಎಂಬ ಯುವತಿಯ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಆರೋಪಿ ಸತೀಶ್ ಮಾರುತಿ ಯಾದವ್ (25) ಕೊಲೆ ಮಾಡಿ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ಸಮೀಕ್ಷಾಗೆ 2018 ರಲ್ಲಿ ಮದುವೆಯಾಗಿದ್ದು, ಮೂರು ತಿಂಗಳಲ್ಲೇ ಗಂಡನನ್ನು ಬಿಟ್ಟು ತನ್ನ ತವರಿಗೆ ಮರಳಿದ್ದಳು. ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆಗೆ ತೆಲಂಗಾಣದಿಂದ ಬಂದಿದ್ದ ಐಶು ಆಂಪ್ಲೆ ಮತ್ತು ಕೊಲ್ಹಾಪುರದ ಸತೀಶ್ ಯಾದವ್ ಪರಿಚಯವಾಗಿತ್ತು. ಈಕೆ ತನ್ನ ತಾಯಿ, ತಂಗಿ ಜೊತೆ ಕಸಬಾದ ಬಾವ್ಡಾದ ಜೈ ಭವಾನಿ ಗಲ್ಲಿಯಲ್ಲಿ ವಾಸ ಮಾಡುತ್ತಿದ್ದಳು.
ಈಕೆ ಕಳೆದ ಮೂರು ತಿಂಗಳಿನಿಂದ ಸರ್ನೋಬತ್‌ವಾಡಿಯ ಫ್ಲ್ಯಾಟ್‌ನಲ್ಲಿ ಲಿವ್ ಇನ್ ನಲ್ಲಿದ್ದರು. ಆದರೆ ಇವರಿಬ್ಬರ ನಡುವೆ ಜಗಳವಾಗುತ್ತಿತ್ತು. ಹಾಗಾಗಿ ಈಕೆ ಎಂಟು ದಿನದ ಹಿಂದೆ ತಾಯಿ ಮನೆಗೆ ವಾಪಾಸು ಬಂದಿದ್ದಳು.
ಮಂಗಳವಾರ ಸಮೀಕ್ಷಾ ಮತ್ತು ಐಶು ತಮ್ಮ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಫ್ಲ್ಯಾಟ್‌ಗೆ ಬಂದಿದ್ದು, ಇದನ್ನು ತಿಳಿದ ಸತೀಶ್ ಕೋಪದಿಂದ ಅಲ್ಲಿಗೆ ಬಂದಿದು, ಕೋಪದ ಭರದಲ್ಲಿ ಸಮೀಕ್ಷಾಳನ್ನು ಕೋಣೆಗೆ ಕರೆದುಕೊಂಡು ಹೋಗಿ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಆಕೆಯ ಎದೆಯಲ್ಲಿ ಹಾಗೇ ಸಿಲುಕಿಕೊಂಡಿತ್ತು.
ಆರೋಪಿ ಕೊಣೆಯ ಹೊರಗಿನಿಂದ ಬೀಗ ಹಾಕಿ ಬೈಕ್‌ನಲ್ಲಿ ಪರಾರಿಯಾಗಿದ್ದು, ಐಶು ಬಾಗಿಲು ತೆರೆಯಲು ಪ್ರಯತ್ನ ಪಟ್ಟರೂ ಹೊರಗಿನಿಂದ ಲಾಕ್ ಆಗಿದ್ದರಿಂದ ಆಕೆಗೆ ಆಗಲಿಲ್ಲ. ಕೂಡಲೇ ಐಶು ತನ್ನ ಸ್ನೇಹಿತ ಅಭಿಷೇಕ್‌ಗೆ ಫೋನ್ ಮಾಡಿದ್ದು, ಆತ ಸ್ಥಳಕ್ಕೆ ಬಂದು ಬಾಗಿಲು ತೆರೆದಾಗ ಸಮೀಕ್ಷಾ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅತಿಯಾದ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಣೆ ಮಾಡಿದರು.
ಪೊಲೀಸರಿಂದ ತನಿಖೆ ನಡೆಯುತ್ತಿದೆ. ಪರಾರಿಯಾದ ಆರೋಪಿಗಾಗಿ ತೀವ್ರ ಶೋಧ ನಡೆಯುತ್ತಿದೆ.
