Kasaragod: ಕಾಸರಗೋಡು: ಹಾವಿನ ದ್ವೇಷ 12 ವರ್ಷ ಅಂತಾರೆ. ಆದರೆ ಇವರಿಬ್ಬರ ದ್ವೇಷಕ್ಕೆ ಬರೋಬ್ಬರಿ 50 ವರ್ಷ ಆಯಸ್ಸು! ತಾವು ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ನಡೆದ ಹಳೇ ಜಗಳದ ದ್ವೇಷದಿಂದ ಈಗ 60 ವರ್ಷ ದಾಟಿದ ನಂತರ ಆ ಜಗಳ ನೆನೆದು ಆ ಮಾಜಿ ಸಹಪಾಠಿಗಳು ಮತ್ತೆ ಪರಸ್ಪರ ಕಲ್ಲಿನಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಇದೀಗ ಕೇರಳದ 62 ವರ್ಷ ಪ್ರಾಯದ ವೆಳ್ಳರಿಕುಂಡು ಮಾಲೋಂ ವೆಟಕೊಂಬಿಲ್ ಬಾಬು ನೀಡಿದ ದೂರಿನ ಅನ್ವಯ ನಾಲ್ಕನೇ ತರಗತಿಯಲ್ಲಿ ಸಹಪಾಠಿಯಾಗಿದ್ದ ಮಾಲೋ ನಿವಾಸಿ ಬಾಲಕೃಷ್ಣನ್ ಮತ್ತು ಆತನ ಸ್ನೇಹಿತ ವಲಿಯ ಪ್ಲಾಕಲ್ ಮ್ಯಾಥ್ಯು ವಿರುದ್ಧ ವೆಳ್ಳರಿಕುಂಡು ಪೊಲೀಸರು ಕೇಸು ದಾಖಲಿಸಿದ್ದಾರೆ. ವಿಶೇಷ ಅಂದರೆ ಈ ಮೂರೂ ಜನರಿಗೆ ಇವತ್ತಿಗೆ 62 ವರ್ಷ ವಯಸ್ಸಾಗಿದೆ! ಬಾಲ್ಯದ ದ್ವೇಷ ಮತ್ತು ವೃದ್ಧಾಪ್ಯದ ರೋಷದಿಂದ ಗಾಯಗೊಂಡ ಬಾಬು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಕೈಗೆ ಸಿಕ್ಕ ಕಲ್ಲಿನಿಂದ ಮುಖ ಮತ್ತು ಬೆನ್ನಿಗೆ ಜಜ್ಜಿ ಗಾಯಗೊಳಿಸಿರುವುದಾಗಿ ಬಾಬು ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
