Mangaluru : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಮಹತ್ವದ ಸಾಧನೆಯನ್ನು ಮಾಡಿದೆ. ಅದೇನೆಂದರೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಗ್ರಹಿಸಿದ 170 ಟನ್ ಪ್ಲಾಸ್ಟಿಕ್ ಕಸವನ್ನು ಸದ್ಬಳಕೆ ಮಾಡಿಕೊಂಡು, 50 ಕಿ.ಮೀ. ಸರ್ವಿಸ್ ರಸ್ತೆ ನಿರ್ಮಿಸಿದೆ.
ಹೌದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜಿಲ್ಲೆಯ ತಲಪಾಡಿಯಿಂದ ನಂತೂರುವರೆಗೆ ಹಾಗೂ ಸುರತ್ಕಲ್‌ನಿಂದ ಸಾಸ್ತಾನದವರೆಗೆ ಕಡಿಮೆ ಸಾಂದ್ರತೆಯ ಪಾಲಿಥಿಲೀನ್ (ಎಲ್‌ಡಿಪಿಇ) ಬಳಸಿ ರಸ್ತೆಯನ್ನು ನಿರ್ಮಿಸಲಾಗಿದೆ. ಸರ್ವಿಸ್ ರಸ್ತೆ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಂಡಿದೆ.
ಪ್ಲಾಸ್ಟಿಕ್ ರಸ್ತೆ ಅಂದರೆ ಏನು?
ಪ್ಲಾಸ್ಟಿಕ್ ರಸ್ತೆ ನಿರ್ಮಾಣದ ಕುರಿತು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ‘ಅಧಿಕ ಮಳೆಯಾಗುವ ಪ್ರದೇಶದಲ್ಲಿ ಡಾಂಬರ್ ರಸ್ತೆಗಳಲ್ಲಿ ಬಹುಬೇಗ ಹೊಂಡಗಳು ನಿರ್ಮಾಣವಾಗುತ್ತವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಕಚೇರಿಯ ಯೋಜನಾ ನಿರ್ದೇಶಕರು, ಕೇಂದ್ರ ಹೆದ್ದಾರಿ ಇಲಾಖೆಗೆ ಪರ್ಯಾಯ ಯೋಜನೆಯ ವರದಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಹೆದ್ದಾರಿ ನಿರ್ಮಾಣದ ಮಾನದಂಡಗಳನ್ನು ರೂಪಿಸುವ ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ಜಿಲ್ಲೆಯ ಸರ್ವಿಸ್ ರಸ್ತೆ ನಿರ್ಮಾಣ ಪ್ರಯೋಗಕ್ಕೆ ಎಲ್‌ಡಿಪಿಇ ಪ್ಲಾಸ್ಟಿಕ್ ಬಳಕೆಗೆ ಅನುಮತಿ ನೀಡಿತ್ತು ಎಂದು ತಿಳಿಸಿದ್ದಾರೆ.
ಅಲ್ಲದೆ ರಸ್ತೆ ನಿರ್ಮಾಣಕ್ಕೆ ಜಲ್ಲಿ ಮತ್ತು ಬಿಟುಮಿನ್ ಮಿಶ್ರಣದ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಸುಮಾರು 160 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಡಾಂಬರ್ ಬಿಸಿ ಮಾಡುವಾಗ ಎಲ್‌ಡಿಪಿಇ ಬಳಕೆ ಮಾಡಿ, ಅದನ್ನು ಜಲ್ಲಿ ಮೇಲೆ ಸುರಿದಾಗ ರಸ್ತೆಯ ಗಟ್ಟಿತನ ಹೆಚ್ಚಾಗಿ, ದೀರ್ಘ ಬಾಳಿಕೆ ಬರುತ್ತದೆ. ಡಾಂಬರ್ ಮತ್ತು ಎಲ್‌ಡಿಪಿಇ ಪ್ಲಾಸ್ಟಿಕ್ ಅನ್ನು ಶೇ 90:10ರ ಅನುಪಾತದಲ್ಲಿ ಬಳಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
