Kodagu: ಗುತ್ತಿಗೆ ಕಾರ್ಮಿಕನೋರ್ವ ವಿದ್ಯುತ್ ಕಂಬದೊಂದಿಗೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ 1.40 ಕ್ಕೆ ಸುಂಟಿಕೊಪ್ಪದಲ್ಲಿ ನಡೆದಿದೆ.
ಗುತ್ತಿಗೆ ಸಂಸ್ಥೆಯೊಂದು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ವಿದ್ಯುತ್ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದು, ಗುತ್ತಿಗೆ ಕಾರ್ಮಿಕ ನಂದೀಶ್ ಎಂಬುವವರು ಇಂದು ಗಣೇಶ್ ಕ್ಯಾಂಟೀನ್ ಮುಂಭಾಗದ ಹೆದ್ದಾರಿ ಒತ್ತಿನ ಚರಂಡಿ ಬದಿಯಲ್ಲಿ ನೆಡಲಾಗಿದ್ದ ಹೊಸ ಕಂಬವನ್ನು ಏರಿ ಇನ್ನೊಂದು ಕಂಬದಿಂದ ಅಳವಡಿಸುತ್ತಿದ್ದ ವಯರ್ ಅನ್ನು ಎಳೆಯುತ್ತಿದ್ದರು. ಈ ಸಂದರ್ಭ ಸಾಕಷ್ಟು ಆಳದಲ್ಲಿರದಿದ್ದ ಹೊಸ ಕಂಬ ನೆಲಕ್ಕುರುಳಿದೆ. ಅದರೊಂದಿಗೆ ನಂದೀಶ್ ಅವರು ಕೆಳಗೆ ಬಿದ್ದಿದ್ದಾರೆ. ಕಂಬಕ್ಕೆ ಅಳವಡಿಸಿದ್ದ ಉಕ್ಕಿನ ಸಲಾಕೆ ನಂದೀಶ್ ರವರ ಸೊಂಟದ ಭಾಗಕ್ಕೆ ಆಳವಾಗಿ ಚುಚ್ಚಿದೆ. ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಕಂಬದ ಸಮೀಪ ಮತ್ತೊಂದು ಕಂಬದಲ್ಲಿದ್ದ ಇನ್ನೊರ್ವ ಗುತ್ತಿಗೆ ಕಾರ್ಮಿಕ ಯೋಗೇಶ್ ಎಂಬುವವರು ಕೂಡ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
