Bear Attack: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕಾಡು ಪ್ರಾಣಿಗಳ ಉಪಟಳ ಜಾಸ್ತಿಯಾಗಿದೆ. ಮಾನವ-ಪ್ರಾಣಿಗಳ ಸಂಘರ್ಷ ಇಂದು ನಿನ್ನೆಯದಲ್ಲ. ಆದರೆ ಇತ್ತೀಚೆಗೆ ಮನುಜ ಅರಣ್ಯ ಸಂಪತ್ತಿಗೆ ಹೆಚ್ಚು ಹಾನಿ ಉಂಟು ಮಾಡುತ್ತಿದ್ದಂತೆ ಪ್ರಾಣಿಗಳು ಊರು ಕಡೆ ದಾಳಿ ಇಡಲು ಆರಂಭಿಸಿವೆ. ಆನೆ, ಹುಲಿ, ಚಿರತೆ, ಕಾಡುಕೋಣ, ನವಿಲು, ಮಂಗ, ಕರಡಿ ಎಲ್ಲಾ ಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಲಗ್ಗೆ ಇಡುತ್ತಿದ್ದಾವೆ. ಪ್ರಾಣಿಗಳ ದಾಳಿಗೆ ಸಾರ್ವಜನಿಕರು ಹೈರಣಾಗಿ ಹೋಗಿದ್ದಾರೆ.
ಇದೀಗ ಮಡಿಕೇರಿಯ ಪೊನ್ನಂಪೇಟೆ ತಾಲೂಕು, ಬಾಳಲೆ ಸಮೀಪದ ಜಾಗಲೆ ಎಂಬಲ್ಲಿ ವ್ಯಕ್ತಿಯೋರ್ವನ ಮೇಲೆ ಕರಡಿ ದಾಳಿ ನಡೆಸಿ ಭೀಕರ ಗಾಯಗೊಳಿಸಿದೆ. ಆಳಮೇoಗಡ ಬಿದ್ದಪ್ಪ ಎಂಬುವರ ತೋಟದ ಲೈನ್ ಮನೆಯಲ್ಲಿ ವಾಸಿಸುತ್ತಿದ್ದ ಕಾಕು ಎಂಬುವರ ಪುತ್ರ ಕುಳ್ಳ (42) ನಿನ್ನೆ ರಾತ್ರಿ 11 ಗಂಟೆ ಸಮಯದಲ್ಲಿ ಮನೆಯ ಹೊರಗಡೆ ಮೂತ್ರ ವಿಸರ್ಜನೆ ಎಂದು ತೆರಳಿದ್ದಾರೆ. ಈ ಸಂದರ್ಭ ಕರಡಿ ದಾಳಿ ನಡೆಸಿ ಮುಖದ ಭಾಗಕ್ಕೆ ಹೆಚ್ಚಿನ ಗಾಯಗೊಳಿಸಿದೆ. ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಕುಳ್ಳನನ್ನು ಹೆಚ್ಚು ಹೆಚ್ಚುಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.
