Bhavana Ramanna: ನಟಿ ಭಾವನಾ ರಾಮಣ್ಣ ಐವಿಎಫ್ ಚಿಕಿತ್ಸೆ ಮೂಲಕ ತಾಯಿಯಾಗಲು ಹೊರಟಿರುವ ವಿಚಾರ ಭಾರೀ ಸುದ್ದಿ ಆಗುತ್ತಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ಕೂಡ ನಡೀತಿದೆ. ಆದರೆ ನಟಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ನಿರ್ಧಾರದ ಬಗ್ಗೆ ಹೆಮ್ಮೆ ಇದೆ ಎಂದು ಮಾತನಾಡುತ್ತಿದ್ದಾರೆ. ಈ ನಡುವೆ ಕುತೂಹಲ ಕೆರಳಿಸಿರುವ ವಿಚಾರವೆಂದರೆ ಭಾವನ ಅವರು ತಾಯಿಯಾಗಲು ವೀರ್ಯದಾನ ಮಾಡಿದ ವ್ಯಕ್ತಿ ಯಾರು ಎಂಬುದು?
ಹೌದು, ನಟಿ ಭಾವನ ಅವರು IVF ಮೂಲಕ ತಾಯಿಯಾಗಲು ವೀರ್ಯ ದಾನ ಮಾಡಿದ ವ್ಯಕ್ತಿ ಯಾರೆಂಬುದು ಸದ್ಯ ಕುತೂಹಲಕ್ಕೆ ನಡೆಸಿರುವ ವಿಚಾರ. ಇದೀಗ ಭಾವನಾ ಅವರು ತಮ್ಮ ತಾಯಿತನದ ವಿಚಾರದ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಐವಿಎಫ್ ಸಂಬಂಧಿಸಿದಂತೆ ಡೋನರ್ ಬಗ್ಗೆ ಕೂಡ ತಿಳಿಸಿದ್ದಾರೆ.
ನಟಿ ಭಾವನಾ ಮಾತನಾಡಿ “ಡೋನರ್ ಆಯ್ಕೆ ಬಗ್ಗೆ ಒಂದಷ್ಟು ನಿಯಮಾವಳಿಗಳಿವೆ. ಪೇಷೆಂಟ್ ಅಗತ್ಯತೆಗೆ ತಕ್ಕಂತೆ ಏನೆಲ್ಲಾ ಅರ್ಹತೆಗಳಿರಬೇಕು ಡೋನರ್‌ಗೆ ಎನ್ನುವುದು ಇದೆ. ಯಾವ ಡೋನರ್ ಅಲ್ಲಿ ಏನೇನು ಇರಬೇಕು, ಡೋನರ್ ಯಾವ ವಯಸ್ಸಾಗಿರಬೇಕು ಎಲ್ಲವನ್ನು ಪರಿಗಣಿಸುತ್ತಾರೆ. ಡೋನರ್ ರಕ್ತಪರೀಕ್ಷೆ ನಡೆಸುವುದರಿಂದ ಸಾಕಷ್ಟು ಮಾಹಿತಿ ಸಿಗುತ್ತದೆ. ಅವರ ದೈಹಿಕ, ಮಾನಸಿಕ ಹಾಗೂ ಕ್ರಿಮಿನಲ್ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.
ಡೋನರ್ ಆಯ್ಕೆಗೆ ಅವಕಾಶ ಇದ್ಯಾ? ಇಲ್ವಾ? ಗೊತ್ತಿಲ್ಲ. ನಾನು ವೈದ್ಯರನ್ನು ನಂಬಿದೆ. ಅವ್ರು ಹೇಳಿದ ಡೋನರ್ ಅನ್ನು ಒಪ್ಪಿಕೊಂಡೆ. ಆದರೆ ನಾನು ದಕ್ಷಿಣ ಭಾರತದ ಡೋನರ್ ಬೇಕು ಎಂದಿದ್ದೆ. ನಾನು ದೆಹಲಿಗೆ ಹೋಗಿ ಚಿಕಿತ್ಸೆ ಪಡೆದಿದ್ದರೆ ಉತ್ತರ ಭಾರತದ ಡೋನರ್ ಸಿಗುವ ಸಾಧ್ಯತೆಯಿತ್ತು. ಆಹಾರ ಶೈಲಿ, ಜೀನ್ಸ್, ಡಿಎನ್‌ಎ ಎಲ್ಲಾ ಒಂದೇ ತರ ಇರುತ್ತದೆ ಎನ್ನುವ ಕಾರಣಕ್ಕೆ ನಾನು ದಕ್ಷಿಣದವರು ಬೇಕು ಎಂದಿದ್ದೆ. ಇನ್ನುಳಿದಂತೆ ನಾನು ಏನು ಕೇಳಲಿಲ್ಲ. ಈಗ ದೊಡ್ಡ ದೊಡ್ಡ ಆಸ್ಪತ್ರೆ ಬ್ರ್ಯಾಂಡ್‌ಗಳಿವೆ. ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ.
ಕೆಲ ಸ್ನೇಹಿತರು ಡೋನರ್ ಆಗೋಕೆ ಸಿದ್ಧ ಎಂದರು. ಆದರೆ ಒಬ್ರು ಹೇಳಿದ್ದು ನನಗೆ ಸೆನ್ಸಿಬಲ್ ಎನ್ನಿಸಿತ್ತು ಎಂದು ಭಾವನಾ ನೆನಪು ಮಾಡಿಕೊಂಡಿದ್ದಾರೆ. “ವೀರ್ಯದಾನ ಮಾಡಬಹುದು. ಆದ್ರೆ ನಾಳೆ ಮಕ್ಕಳು ನಮ್ಮ ಮುಂದೆ ಓಡಾಡುವಾಗ ಹೇಳದೇ ಹೇಗೆ ಇರುವುದು? ನನಗೆ ಆ ರೀತಿ ಅನ್ನಿಸಬಹುದು ಎಂದು ಅವ್ರು ಹೇಳಿದ್ರು. ನನಗೂ ಅವ್ರು ಹೇಳಿದ್ದು ಸರಿ ಎನಿಸಿತ್ತು. ಗೊತ್ತಿರುವವರು ಆಗಿದ್ರೆ, ನಾಳೆ ಅವ್ರಿಗೆ ಆ ಭಾವನೆ ಬರಬಹುದು. ಅಥವಾ ನಾನು ನಾಳೆ ನೀವು ಕೂಡ ಮಕ್ಕಳ ಜವಾಬ್ದಾರಿ ತಗೋಬೇಕು ಎಂದು ಹೇಳಬಹುದು. ಹಾಗಾಗಿ ಆ ಸಮಸ್ಯೆ ಬೇಡ ಎಂದು ಸುಮ್ಮನಾದೆ” ಎಂದು ಭಾವನಾ ವಿವರಿಸಿದ್ದಾರೆ.
ಇದನ್ನೂ ಓದಿ: Belthangady: ಬೆಳ್ತಂಗಡಿ: ವಿಷ ಸೇವಿಸಿ ಯುವಕ ಆತ್ಮಹತ್ಯೆ!
