Bengaluru Stampede: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣ ನಡೆದು ಒಂದು ತಿಂಗಳ ನಂತರ ಬೆಂಗಳೂರು ಡಿಸಿ ನೇತೃತ್ವದ ಮ್ಯಾಜಿಸ್ಟೇಟ್ ತನಿಖೆ ಪೂರ್ಣಗೊಳಿಸಿದೆ. ಶೀಘ್ರದಲ್ಲೇ ಸರ್ಕಾರಕ್ಕೆ ಡಿಸಿ ಜಗದೀಶ್ ತನಿಖಾ ರಿಪೋರ್ಟ್ ಸಲ್ಲಿಸಲಿದ್ದಾರೆ. ಒಂದೆರಡು ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ಮೊದಲನೆಯದಾಗಿ ಕೆಎಸ್ಸಿಎ ಹಾಗೂ ಪೊಲೀಸ್ ಅಧಿಕಾರಿಗಳ ಲೋಪ ಪತ್ತೆಯಾಗಿದೆ ಎಂಬ ಮಾಹಿತಿಯಿದೆ.
ಕಾಲ್ತುಳಿತ ದುರಂತ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿ ಸೇರಿದಂತೆ ಹಲವರ ವಿಚಾರಣೆಯನ್ನು ಡಿಸಿ ನಡೆಸಿದ್ದಾರೆ. ತನಿಖಾಧಿಕಾರಿ ಕಾಲ್ತುಳಿತ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತನಿಖೆ ವೇಳೆ ದುರಂತಕ್ಕೆ ನಿಖರ ಕಾರಣ ಏನು ಅನ್ನೋದನ್ನು ಡಿಸಿ ಜಗದೀಶ್ ಪತ್ತೆ ಮಾಡಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಈ ಘಟನೆ ಸಂಬಂಧ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ.
ಜೂನ್ 4 ರಂದು ಆರ್ಸಿಬಿ ವಿಜಯೋತ್ಸವ ವೇಳೆ 11 ಮಂದಿ ಕಾಲ್ತುಳಿತದಿಂದ ಸಾವನ್ನಪ್ಪಿದ್ದರು. ಈ ಸಂಬಂಧ ಘಟನೆಗೆ ಕಾರಣ ಪತ್ತೆ ಮಾಡಿ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿತ್ತು. ಈಗಾಗಲೇ ಘಟನೆ ಸಂಬಂಧ ಸಂಪೂರ್ಣ ತನಿಖೆ ನಡೆಸಿ ಜಿಲ್ಲಾಧಿಕಾರಿ ವರದಿ ಸಿದ್ದಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ದುರಂತಕ್ಕೆ ಹಲವು ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ.
ವರದಿಯಲ್ಲಿ ಏನೆಲ್ಲಾ ಉಲ್ಲೇಖ?
ಟಿಕೆಟ್ ಗೊಂದಲವೇ ಘಟನೆಗೆ ಪ್ರಮುಖ ಕಾರಣ ಹಾಗೂ ಆರ್‌ಸಿಬಿ ಸಾಮಾಜಿಕ ಮಾಧ್ಯಮಗಳಲ್ಲಿ ಉಚಿತ ಟಿಕೆಟ್ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾವಣೆ ಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಲು ನಿಖಿಲ್ ಸೋಸಲೆ ಕಾರಣ ಕರ್ತರಾಗಿದ್ದಾರೆ. ಪೊಲೀಸರು ಈ ವೇಳೆ ಬಂದೋಬಸ್ತ್ ವ್ಯವಸ್ಥೆಯನ್ನು ಸರಿಯಾಗಿ ಮಾಡಿಕೊಂಡಿರಲಿಲ್ಲ. ಕಾಲ್ತುಳಿತ ಸಂಭವಿಸಿದ್ದ ಪ್ರವೇಶದ್ವಾರಗಳ ಬಳಿ ಪೊಲೀಸರೇ ಇರಲಿಲ್ಲ ಎಂಬ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಕ್ರೀಡಾಂಗಣ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇರಲಿಲ್ಲ. ವಿಧಾನಸೌಧದ ಬಳಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಪೊಲೀಸ್ ಇಲಾಖೆ ಹೆಚ್ಚು ಗಮನ ಹರಿಸಿತ್ತು. ವಿಜಯೋತ್ಸವಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳ ನಿಯೋಜನೆಗಾಗಿ ರೋಲ್ ಕಾಲ್ ನಡೆದಿರಲಿಲ್ಲ. ಕೆಎಸ್‌ಆರ್‌ಪಿ ಸಿಬ್ಬಂದಿಗೂ ಸರಿಯಾದ ಸಂದೇಶ ನೀಡಿರಲಿಲ್ಲ. ಐಪಿಎಲ್ ಪಂದ್ಯದಷ್ಟೇ ವಿಜಯೋತ್ಸವಕ್ಕೂ ಜನರು ಬರಬಹುದು ಅನ್ನೋ ಮಾಹಿತಿಯನ್ನಷ್ಟೆ ನೀಡಲಾಗಿತ್ತು ಎಂದು ಡಿಸಿ ನೀಡಲಿರುವ ವರದಿಯಲ್ಲಿ ಇದೆ ಎಂದು ಹೇಳಲಾಗುತ್ತಿದೆ.
