Kadaba: ಕಡಬ ತಾಲೂಕು, ಐತ್ತೂರು ಗ್ರಾಮದ, ಬೆತ್ತೋಡಿ – ಮಾಳ ವರದ ರೈ ಮತ್ತು ವಾರಿಜ ರೈ ದಂಪತಿಗಳ ಮಗನಾದ ದಿನೇಶ್ ರೈ ಅವರು, 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಿಲ್ಲಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುಗಳಾದ ಶ್ರೀ ತಾರನಾಥ ಬಲ್ಯಾಯ ವರ್ಕಾಡಿಯವರಿಂದ ನಾಟ್ಯಾಭ್ಯಾಸ ಮಾಡಿ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಗೊಂಡರು.

ನಂತರ ಶ್ರೀ ಕಟೀಲು ಮೇಳ, ಪುತ್ತೂರು ಮೇಳ, ಕುಂಟಾರು ಮೇಳ, ಮಂಗಳಾದೇವಿ ಮೇಳ, ತೆಂಕು – ಬಡಗು ಸಮ್ಮಿಶ್ರಗೊಂಡ ಹಿರಿಯಡ್ಕ ಮೇಳ, ತಳಕಲ ಮೇಳ, ಸುಂಕದಕಟ್ಟೆ ಮೇಳ, ಬಾಚಕೆರೆ ಮೇಳ, ಪ್ರಸ್ತುತ ಗೆಜ್ಜೆಗಿರಿ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಸೇವೆಗೈಯುತ್ತಿದ್ದಾರೆ.
ರವಿ ಕುಮಾರ್ ಸುರತ್ಕಲ್ ರಚಿಸಿದ ನಾಗತಂಬಿಲದ ಕೂಸಮ್ಮ (ನಂಜುಂಡ)ನ ಪಾತ್ರ ಯಕ್ಷ ರಂಗದಲ್ಲಿ ಹೊಸ ತಿರುವು ತಂದು ಕೊಟ್ಟಿತ್ತು .ನಾಗರಪಂಚಮಿಯ ನೋಣಯ್ಯ, ವಜ್ರ ಕುಟುಂಬದ ಕಪಟ ಸ್ವಾಮೀಜಿ, ಪವಿತ್ರ – ಪಲ್ಲವಿಯ ಪದ್ಮಾವತಿ,(ಪದ್ದು) ಚೆನ್ನಿ- ಚೆನ್ನಮ್ಮದ ಪುರುಷೋತ್ತಮ, ವಿಜಯಕೇಸರಿಯ ಮಾರುತಿ, ಜೀವನಚಕ್ರದ ನಿಷ್ಠಾವಂತ ಸೇವಕ, ಗುಳಿಗೋದ್ಭವ – ಪಂಜುರ್ಲಿ ಪ್ರತಾಪ ದ ಗೋಪಾಲ, ಹಾಗೂ ಚಂದ್ರ, ಮನ ಸೂರೆಗೊಂಡ ಪಾತ್ರಗಳು. ತೆಂಕು -ಬಡಗಿನಲ್ಲಿ, ತುಳು – ಕನ್ನಡದಲ್ಲಿ , ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಯಾವುದೇ ಪ್ರಸಂಗವಾದರೂ ತನಗೆ ಸಿಕ್ಕಿದ ಪಾತ್ರಗಳ ಅಧ್ಯಯನ ಮಾಡಿ ಹಿರಿಯ, ಕಿರಿಯ ಕಲಾವಿದರಿಂದ ಕೇಳಿ ತಿಳಿದು, ಕಥೆಗೆ ಲೋಪ ಬಾರದಂತೆ ತನ್ನದೇ ಶೈಲಿಯ ಹಾಸ್ಯದಲ್ಲಿ ಜನರನ್ನು ರಂಜಿಸುತ್ತಾರೆ. “ವಿಜಯ ಕಲಾವಿದರು ಕಿನ್ನಿಗೋಳಿ” ತಂಡದ ‘ಲೈಫ್ ಕೊರ್ಪರ’ ತುಳು ನಾಟಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ *ತುಳು ನಾಟಕ ಪರ್ಬ* ದಲ್ಲಿ ಪ್ರಶಾಂತ್ ಸಿ. ಕೆ ನಿರ್ದೇಶನದ, ಬೇರೆ ಬೇರೆ ರಂಗಗಳಿಂದ ಆಯ್ದ ದಿಗ್ಗಜರೊಂದಿಗೆ *ಸತ್ಯೊದ ಬಿರುವೆರ್* ನಾಟಕದಲ್ಲಿ *ಪಯ್ಯಬೈದ್ಯನಾಗಿ* ಅಭಿನಯಿಸಿದ್ದಾರೆ. ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಪೋದ ಪಿರವು. ಮತ್ತು ಸಜ್ಜಿಗೆ ಬಜಿಲ್ ತುಳು ದಾರಾವಾಹಿ, *ರಾಧ ಸುರಭಿ ಕಂಬೈನ್ಸ್* ರವರ ನವೀನ್ ಮಾರ್ಲ ಕೊಡಂಗೆ ನಿರ್ದೇಶನದ *ವಿಕ್ರಾಂತ್* ತುಳು ಸಿನಿಮಾ, ಅಲ್ಲದೆ ನಮ್ಮ ಟಿವಿ ವಾಹಿನಿಯ ‘ಬಲೇ ತೆಲಿಪಾಲೆ’ ಕಾಮಿಡಿ ಶೋ, ದೈಜಿವರ್ಲ್ಡ್ ವಾಹಿನಿಯ ‘ಯಕ್ಷ ರಸ’, ನಮ್ಮ ಕುಡ್ಲ ವಾಹಿನಿಯ ‘ಯಕ್ಷ ತೆಲಿಕೆ’ ಹೀಗೆ ತಮಗೆ ಸಿಕ್ಕ ಅವಕಾಶಗಳಲ್ಲಿ ಪ್ರಾಮಾಣಿಕ ಪ್ರಯತ್ನದ ಮೂಲಕ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. “ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಇರುವೈಲು” ಇವರು *ಯಕ್ಷ ಬೊಳ್ಳಿ* ಎಂಬ ಬಿರುದಿನೊಂದಿಗೆ ಗೌರವಿಸಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ, “*ಯಕ್ಷ ರಕ್ಷಾ -2017 ಪ್ರಶಸ್ತಿ*” ಬೆಂಗಳೂರಿನ ಯುವ ಬಂಟರ ಸಂಭ್ರಮದಲ್ಲಿ “*ಬಂಟ್ಸ್ ಯಂಗ್ ಅಚಿವರ್ಸ್ -2018″* ಪ್ರಶಸ್ತಿ , ಶ್ರವಣಬೆಳಗೊಳದಲ್ಲಿ ನಡೆದ 12ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ *ಕರ್ನಾಟಕ ಯುವ ರತ್ನ” ಪ್ರಶಸ್ತಿ* ಅಲ್ಲದೆ ಕರ್ನಾಟಕ, ಕೇರಳ, ಮುಂಬೈ, ಪೂನಾ, ಮಸ್ಕತ್, ಕತಾರ್, ದುಬೈ ಹೀಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿರುತ್ತಾರೆ.

ತುಳು ಭಾಷೆ, ತುಳುಲಿಪಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹುಟ್ಟಿಕೊಂಡ “ನಮ್ಮ ತುಳುನಾಡು ಟ್ರಸ್ಟ್ (ರಿ) ಕುಡ್ಲ” ಇದರ ಕಾರ್ಯಧ್ಯಕ್ಷರಾಗಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿರುವಾಗ ಯಕ್ಷಗಾನ ಕಲಿಯುತ್ತಿರುವ ತಂಡದವರಲ್ಲಿ ತುಳುಭಾಷೆ ಮತ್ತು ತುಳು ಯಕ್ಷಗಾನದ ಮೇಲೆ ಆಸಕ್ತಿ ಹುಟ್ಟಿಸಲು ಪೌರಾಣಿಕ ಪ್ರಸಂಗವನ್ನು ತುಳು ಭಾಷೆಯಲ್ಲಿ ಪ್ರದರ್ಶನ ಮಾಡುವುದಕ್ಕೊಂದು “ತುಳು ಯಕ್ಷ ಜಾತ್ರೆ”. ಹಳ್ಳಿಯಲ್ಲಿರುವ ನಾಟಕ ತಂಡಗಳನ್ನ ಒಟ್ಟು ಸೇರಿಸಿ “ತುಳು ನಾಟಕ ಪರ್ಬ”, ಅಲ್ಲದೆ ತುಳು ತಾಳಮದ್ದಳೆ, ತುಳುವ ಐಸಿರಿ ಹೀಗೆ ತುಳು ಭಾಷೆಯನ್ನು ಬೆಳೆಸುವುದಕೋಸ್ಕರ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸೇವೆ ಸಲ್ಲಿಸಿರುತ್ತಾರೆ. ತನ್ನಲ್ಲಿ ನಗಲಾರದಷ್ಟು ನೋವಿದ್ದರೂ ಕಲಾ ಸೇವೆಯಲ್ಲಿ ಅದನ್ನೆಲ್ಲ ಮರೆತು 25 ವರ್ಷಗಳಿಂದ ಕಲಾವಿದರಾಗಿ ದುಡಿಯುತ್ತಿದ್ದಾರೆ.

ಬರಹ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಇದನ್ನೂ ಓದಿ: Mangalore: ಮಂಗಳೂರು ಯುವತಿಗೆ ಪ್ರತಿಷ್ಠಿತ ಕಾರ್ ಸಂಸ್ಥೆಯಲ್ಲಿ ಕೆಲಸ! ಆದಾಯ ಎಷ್ಟು ಗೊತ್ತಾ..?
