Bengaluru : ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರನ್ನು ಐದು ವಿಭಾಗಗಳಾಗಿ ವಿಂಗಡಣೆ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಅಡಿಯಲ್ಲಿ ಐದು ನಗರ ಪಾಲಿಕೆ ಮಾಡಿ ಆದೇಶಿಸಿದೆ.
ಹೌದು, ಸಚಿವ ಸಂಪುಟ ಸಭೆ ಅನುಮೋದನೆ ನಂತರ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ 5 ನಗರಪಾಲಿಕೆ ರಚಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಬೆಂಗಳೂರು ಆಡಳಿತ ಸುಧಾರಣೆ ದೃಷ್ಟಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ರಚಿಸಲಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಣೆಗೆ 5 ಪಾಲಿಕೆಗಳನ್ನು ರಚಿಸಿ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದೆ.
5 ಪಾಲಿಕೆಗಳು ಯಾವ್ಯಾವು?
ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ
ಬೆಂಗಳೂರು ಉತ್ತರ ಮಹಾನಗರ ಪಾಲಿಕೆ
ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ
ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆ
ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ
ಸಮಿತಿ ವರದಿಯಲ್ಲಿ ಏನಿತ್ತು?
ಅಧಿಕಾರ ವಿಕೇಂದ್ರೀಕರಣದ ಸಲುವಾಗಿ ಬಿಬಿಎಂಪಿಯನ್ನು 7ರ ವರೆಗೆ ಎಷ್ಟು ಭಾಗಗಳಾಗಿ ಬೇಕಿದ್ದರೂ ವಿಂಗಡಿಸುವ ಕುರಿತು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್ ನೇತೃತ್ವದ ಗ್ರೇಟರ್ ಬೆಂಗಳೂರು ಸಮಿತಿಯು ಶಿಫಾರಸು ಮಾಡಿತ್ತು. ಪಾಲಿಕೆಗಳನ್ನು ರಚನೆ ಮಾಡುವ ಸಂದರ್ಭದಲ್ಲಿ ವಾರ್ಡ್ಗಳ ಸಂಖ್ಯೆಯೂ ಹೆಚ್ಚಳ ಮಾಡಬೇಕು. ಪ್ರತಿ ಪಾಲಿಕೆಗೂ 100ರಿಂದ 125 ವಾರ್ಡ್ಗಳನ್ನು ರಚನೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.
