Mangaluru: ಕ್ಯಾನ್ಸರ್ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಂಗಳೂರಿನ (Mangaluru) ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ (DCCC) ಸ್ಥಾಪನೆಗೆ ಅನುಮೋದನೆ ನೀಡಿದ್ದು, ಇದಕ್ಕಾಗಿ 1.49 ಕೋಟಿ ರೂ. ವರೆಗೆ ಅನುದಾನ ಮೀಸಲಿಡಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಚೌಟ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು 2025-26ರ ಕೇಂದ್ರ ಬಜೆಟ್ನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೇಶದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಡೇ ಕೇರ್ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಿತ್ತು.
ಈ ಉಪಕ್ರಮದ ಭಾಗವಾಗಿ ಪ್ರಥಮ ಹಂತದಲ್ಲಿ ದೇಶದಲ್ಲಿ 200 ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಮುಂದಾಗಿದ್ದು, ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ದತ್ತಾಂಶ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗಳ ಆಧಾರದ ಮೇಲೆ ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ 16 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪಿಸಲು ಜಿಲ್ಲೆಗೆ 1.49 ಕೋಟಿ ವರೆಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತಾವಿತ ಕೇಂದ್ರವು ಮಂಗಳೂರಿನ ವೆಸ್ಲಾಕ್ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕ್ಯಾನ್ಸರ್ ರೋಗನಿರ್ಣಯ, ಕೀಮೋಥೆರಪಿ, ಆರೈಕೆ, ಕ್ಯಾನ್ಸರ್ ತಡೆಗಟ್ಟುವಿಕೆ -ಜಾಗೃತಿ ಕಾರ್ಯಕ್ರಮ ಮತ್ತು ಚಿಕಿತ್ಸಾ ಸೇವೆಗಳ ಜೊತೆಗೆ ಇತರ ಬೆಂಬಲ ಸೇವೆಗಳು ಒದಗಿಸಲಿದೆ. ಜನರಿಗೆ ಗುಣಮಟ್ಟದ ಕ್ಯಾನ್ಸರ್ ಆರೈಕೆಯನ್ನು ಒದಗಿಸುವುದು ಮತ್ತು ತೃತೀಯ ಹಂತದ ಆರೈಕೆ ಕೇಂದ್ರಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಇದನ್ನೂ ಓದಿ: Namma Metro BMRCL: 3 ನೇ ಹಂತದ ಕಿತ್ತಳೆ ಮಾರ್ಗದ ಯೋಜನೆ: 6500 ಮರ ಕಡಿಯಲು ಮುಂದಾದ BMRCL
