Bengaluru : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿದ ((Chinnaswamy Stampede)) ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ನಾಲ್ವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದ್ದು, ಇದೀಗ ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.
ಹೌದು, ಆರ್ ಸಿ ಬಿ ವಿಜಯೋತ್ಸವದ ಸಂಭ್ರಮಾಚರಣೆಯ ವೇಳೆಯಲ್ಲಿ ಕಾಲ್ತುಳಿತ ದುರಂತದಿಂದ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರಂತದ ಸಂಬಂಧ ರಾಜ್ಯ ಸರ್ಕಾರದಿಂದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು. ಆ ಬಳಿಕ ಅಮಾನತು ರದ್ದುಗೊಳಿಸಿತ್ತು. ಇಂದು ಅಮಾನತು ರದ್ದಾದ ಬಿ.ದಯಾನಂದ್, ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಶೇಖರ್ ಎಚ್.ಟೆಕ್ಕಣ್ಣವರ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಅವರಿಗೆ ಸ್ಥಳ ನಿಯೋಜನೆ ಮಾಡಿ ಆದೇಶಿಸಿದೆ.
ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಅವರನ್ನ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಎಡಿಜಿಪಿಯಾಗಿ ಸ್ಥಳ ನಿಯೋಜನೆ ಮಾಡಿದ್ದರೆ, ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಶೇಖರ್ ಎಚ್.ಟೆಕ್ಕಣ್ಣವರ್ ಹಾಗೂ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಅಂದಹಾಗೆ ಬಿ. ದಯಾನಂದ್ ಅವರಿಗೆ ಬಹಳ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದಾಗ ಇವರ ಮೇಲೆ ಮಹಾನಿರ್ದೇಶಕರು ಇದ್ದರು. ಆದ್ರೆ, ಈಗ ಅವರನ್ನು ಕಾರಾಗೃಹ ಮತ್ತು ಸುಧಾರಣಾ ಎಡಿಜಿಪಿಯಾಗಿ ಮಾಡಲಾಗಿದೆ. ಹೀಗಾಗಿ ಅವರಿಗೆ ಈಗ ಯಾರು ಹೆಡ್ ಇಲ್ಲ. ದಯಾನಂದ್ ಅವರೇ ಮುಖ್ಯಸ್ಥರು. ಇದರಿಂದ ದಯಾನಂದ್ ಅವರಿಗೆ ನೀಡಿರುವುದು ದೊಡ್ಡ ಹುದ್ದೆಯಾಗಿದೆ.
