Hubballi: ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ರಾಷ್ಟ್ರ ನಾಯಕರೇ ಈ ಪ್ರಕರಣ ಕಂಡು ದಂಗಾಗಿ ಹೋಗಿದ್ದಾರೆ. ಈ ಘಟನೆಯಂತೂ ಯಾರ ನೆನಪಿನಿಂದ ಮಾಡಿಸಲು ಸಾಧ್ಯವೇ ಇಲ್ಲ ಬಿಡಿ. ಆದರೆ ಇದೀಗ ಈ ಕೃತ್ಯದ ಆರೋಪಿ ಫಯಾಜ್, ತನಗೆ ಜಾಮೀನು ನೀಡುವಂತೆ ಕೋರ್ಟ್ ಗೆ ಮೊರೆ ಹೋಗಿದ್ದಾನೆ.
ಹೌದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನಗೆ ಹೇಗೆ ಜಾಮೀನು ನೀಡಲಾಗಿದೆಯೋ ಹಾಗೇ ನನಗೂ ಜಾಮೀನು ನೀಡಿ ಎಂದು ಆರೋಪಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ. ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ನಾಳೆ ಜಾಮೀನು ಅರ್ಜಿಯ ಅಂತಿಮ ಆದೇಶ ಹೊರಬೀಳಲಿದೆ.
ಇನ್ನು ಈ ಬಗ್ಗೆ ನೇಹಾತಂದೆ ಬೇಸರ ವ್ಯಕ್ತಪಡಿಸಿದ್ದು, ದರ್ಶನ್ ಅವರು ನಟನಾಗಿ ಎಲ್ಲರಿಗೂ ಮಾದರಿಯಾಗಬೇಕು ಆದರೆ ಆರೋಪಿಯಾಗಿ ಇತರರಿಗೆ ಮಾದರಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಕಣ್ಣೀರು ಹಾಕಿದ್ದಾರೆ.
ಏನಿದು ಪ್ರಕರಣ?
ಏ.18ರ ಸಂಜೆ 4:45ರ ಸುಮಾರಿಗೆ ಫಯಾಜ್ ಎಂಬಾತ, ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಬಳಿಕ ಆರೋಪಿ ಕಿಮ್ಸ್ ಆಸ್ಪತ್ರೆಯ ಹಿಂಬದಿ ಅವಿತು ಕುಳಿತಿದ್ದ, ಆತನನ್ನು ಕೂಡಲೇ ಬಂಧಿಸಲಾಗಿತ್ತು. ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗಳಾಗಿದ್ದವು
