CM Siddaramiah : ಸಾರಿಗೆ ನೌಕರರ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೌದು, ಅಧಿಕಾರ ಇದ್ದಾಗ ನವರಂಗಿ ಆಟ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ. ಅಧಿಕಾರ ಇದ್ದಾಗ ಹಗಲುವೇಷ, ವಿರೋಧಪಕ್ಷದಲ್ಲಿದ್ದಾಗ ರೋಷಾವೇಶ. ಸನ್ಮಾನ್ಯ ಅಶೋಕ ಅವರೇ, ಈ ಬಣ್ಣನೆ ನಿಮ್ಮ ಆತ್ಮವಂಚಕ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ನಿಮ್ಮ ಮರೆಗುಳಿತನಕ್ಕೆ ನನ್ನ ಅನುಕಂಪ ಇದೆ. ನನ್ನ ಮತ್ತು ನಮ್ಮ ಸರಕಾರದ ವಿರುದ್ಧ ಆರೋಪ ಮಾಡುವ ಮೊದಲು, ಸಾರಿಗೆ ಸಚಿವರಾಗಿ ನೀವು ಮತ್ತು ನಿಮ್ಮ ಸರಕಾರ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಮಾಡಿರುವ ಮೋಸ ಮತ್ತು ದ್ರೋಹದ ಇತಿಹಾಸವನ್ನು ನೆನಪು ಮಾಡಿಕೊಳ್ಳಿ ಎಂದು ವಿಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾರಿಗೆ ನೌಕರರು ಮೊದಲ ಬಾರಿ ವೇತನ ಪರಿಷ್ಕರಣೆಗಾಗಿ ಮುಷ್ಕರ ನಡೆಸಿದಾಗ ಸಾರಿಗೆ ಸಚಿವರಾಗಿದ್ದವರು ನೀವೇ ಅಲ್ಲವೇ? ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ ಸುದೀರ್ಘ ಮುಷ್ಕರ ನಡೆದಾಗಲೂ ಸಾರಿಗೆ ಸಚಿವರಾಗಿ ಕೈಕಟ್ಟಿ ಕೂತು ತಮ್ಮ ಅಸಾಮರ್ಥ್ಯ ಪ್ರದರ್ಶಿಸಿದ್ದೂ ನೀವೇ ಅಲ್ಲವೇ? ತಮ್ಮ ಪಕ್ಷದ ಅಧಿಕಾರದ ಅವಧಿಯಲ್ಲಿ ಸಾರಿಗೆ ನೌಕರರ ತಿಂಗಳ ವೇತನ ಹೇಗೆ ಪಾವತಿಯಾಗುತ್ತಿತ್ತು ಎಂದು ಮಾಹಿತಿ ಪಡೆದು ತಿಳಿಸುವಿರಾ? ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿ ಸಾರಿಗೆ ನೌಕರರಿಗೆ ಅರ್ಧ ಸಂಬಳ, ಈ ತಿಂಗಳ ಸಂಬಳ ಮುಂದಿನ ತಿಂಗಳು ನೀಡುತ್ತಿದ್ದಾಗ ಅಧಿಕಾರದಲ್ಲಿದ್ದದ್ದು ನಿಮ್ಮದೇ ಪಕ್ಷ ಅಲ್ಲವೇ?
ನಮ್ಮ ಸರ್ಕಾರದ ಅವಧಿಯಲ್ಲಿ 2012-2016 ರವರೆಗೆ ವೇತನ ಹೆಚ್ಚಳ ಮಾಡಿ ಅದನ್ನು 2012 ರಿಂದಲೇ ಪೂರ್ವಾನ್ವಯ ಆಗುವಂತೆ ಜಾರಿಗೊಳಿಸಿದ್ದೆವು. 2016-2020 ರವರೆಗೆ ವೇತನ ಹೆಚ್ಚಳ ಮಾಡಿದಾಗ 2016 ರಿಂದ ಜಾರಿ ಮಾಡಿದ್ದೆವು.
ಆದರೆ ತಮ್ಮ ಪಕ್ಷದ ಆಡಳಿತದ ಅವಧಿಯಲ್ಲಿ ಸಾರಿಗೆ ನೌಕರರು 2020ರಿಂದಲೇ ವೇತನ ಹೆಚ್ಚಳ ಮಾಡಬೇಕೆಂದು ಬೇಡಿಕೆ ಸಲ್ಲಿಸಿದ್ದರೂ 01-03-2023ರಿಂದ ಜಾರಿಗೊಳಿಸಿ ( ಸರ್ಕಾರದ ಆದೇಶ ಸಂಖ್ಯೆ: ಟಿಡಿ 12 ಟಿಸಿಬಿ 2023, ಬೆಂಗಳೂರು) ನೌಕರರಿಗೆ ಅನ್ಯಾಯ ಮಾಡಿದ್ದು ನೀವೇ ಅಲ್ಲವೇ? ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಾತಿ ಮತ್ತು ಹೊಸ ಬಸ್ ಸೇರ್ಪಡೆ ಸ್ಥಗಿತಗೊಂಡಿತ್ತು, ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಹಣ ಪಾವತಿ, ಇತರೆ ಹೊಣೆಗಾರಿಕೆ ಹೀಗೆ ರೂ.5,900 ಕೋಟಿ ಬಾಕಿ ಇತ್ತು ಎಂಬುದರ ಬಗ್ಗೆ ನಿಮಗೆ ಮಾಹಿತಿಯಿದೆಯೇ? ಎಂದು ಪ್ರಶ್ನಿಸಿದ್ದಾರೆ.
