Mangalore: 2022ರಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವೊಮದು ಮಂಗಳೂರಿನ ಕಂಕನಾಡಿ ಬಳಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಇಡಿ ಎಂಟ್ರಿ ನೀಡಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲು ಮಾಡಿ, ತನಿಖೆ ನಡೆಸುತ್ತಿದೆ.
ಈ ಪ್ರಕರಣದ ಆರೋಪಿ ಸೈಯದ್ ಯಾಸೀನ್‌ನ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗಿದೆ. ಆರೋಪಿ ಮಾಜ್ ಮುನೀರ್ ಕ್ರಿಪ್ಟೋ ಕರೆನ್ಸಿ ಏಜೆಂಟ್ಸ್‌ಗಳ ಮೂಲಕ ಮಹಮ್ಮದ್ ಶಾರೀಕ್‌ಗೆ ಹಣ ತಲುಪಿಸಿದ್ದು, ಈ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಅಲಿಯಾಸ್ ಪ್ರೇಮ್ ರಾಜ್ ಕೂಡಾ ಕ್ರಿಪ್ಟೋ ಕರೆನ್ಸಿ ಮೂಲಕ ಇತರ ಆರೋಪಿಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದನು.
ಸರಿ ಸುಮಾರು 2 ಲಕ್ಷ 68 ಸಾವಿರ ಹಣವನ್ನು ಕ್ರಿಪ್ಟೋ ಕರೆನ್ಸಿ ಏಜೆಂಟ್ಸ್‌ಗಳ ಮೂಲಕ ಮೊಹಮ್ಮದ್ ಶಾರೀಕ್ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿದ್ದ. ಈ ಹಣದಿಂದಲೇ ಆರೋಪಿಗಳು ಆನ್ಲೈನ್‌ನಲ್ಲಿ ಐಇಡಿ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಾಗ್ರಿ ಖರೀದಿ ಮಾಡಿದ್ದಾರೆ. ಮೈಸೂರು, ಕೇರಳ, ತಮಿಳುನಾಡಿನಲ್ಲಿ ಐಇಡಿ ಬಾಂಬ್ ಇಡಲು ಇವರ ಪ್ಲಾನ್ ಆಗಿತ್ತು.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಬಳಿಯಲ್ಲೂ ಆಟೋದಲ್ಲಿ ಬ್ಲಾಸ್ಟ್ ಮಾಡುವ ಪ್ಲಾನ್ ಇತ್ತು ಎಂದು ಜಾರಿ ನಿರ್ದೇಶನಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
