Donald Trump : ಭಾರತದ ಮೇಲೆ ಇತ್ತೀಚೆಗಷ್ಟೇ ಶೇ.25ರಷ್ಟು ಪ್ರತಿತೆರಿಗೆ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ದಂಡದ ರೂಪದಲ್ಲಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ತೆರಿಗೆ ಹೇರುವುದಾಗಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಭಾರತ ಮತ್ತು ರಷ್ಯಾ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿವೆ. ಆದರೆ ಟ್ರಂಪ್ ಗೆ ಭಾರತ ರಷ್ಯಾದೊಂದಿಗೆ ಪೆಟ್ರೋಲ್ ಖರೀದಿಸುತ್ತಿದೆ ಎಂಬ ವಿಚಾರಕ್ಕೆ ಮಾತ್ರ ಕೋಪವಲ್ಲ, ಆ ಒಂದು ವಿಚಾರಕ್ಕೂ ಕೂಡ ಭಾರತದ ಮೇಲೆ ಸಿಟ್ಟಿದೆ ಎಂದು ಹೇಳಲಾಗುತ್ತಿದೆ.
ಹೌದು, ಅಮೆರಿಕಾದ ಕೆಲವೊಂದು ರಾಜಕೀಯ ಪಂಡಿತರ ಅಭಿಪ್ರಾಯದ ಪ್ರಕಾರ, ರಷ್ಯಾ ಜೊತೆಗಿನ ತೈಲ ವ್ಯಾಪರದ ಕಾರಣವೊಂದೇ ಸುಂಕದ ನಿರ್ಧಾರಕ್ಕೆ ಇರಲಾರದು. ಬದಲಿಗೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಕದನ ವಿರಾಮದ ಕ್ರೆಡಿಟ್ ಅನ್ನು ಭಾರತ, ಟ್ರಂಪ್ ಗೆ ನೀಡದೇ ಇರುವುದೂ ಕಾರಣವಾಗಿರಬಹುದು ಎಂದು ವ್ಯಾಖ್ಯಾನಿಸುತ್ತಿದ್ದಾರೆ.
ಅಂದಹಾಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ, ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ನಡೆಸಿ, ಪಾಕಿಸ್ತಾನದ ಉಗ್ರರ ತಾಣದ ಮೇಲೆ ದಾಳಿಯನ್ನು ನಡೆಸಿತ್ತು. ಇದರಲ್ಲಿ, ನೂರಾರು ಉಗ್ರರು ಮಟಾಷ್ ಆಗಿದ್ದರು. ಈ ದಾಳಿ ಯುದ್ದದ ಸ್ವರೂಪ ಪಡೆಯುತ್ತಿದ್ದ ವೇಳೆ, ಡೊನಾಲ್ಡ್ ಟ್ರಂಪ್, ಟ್ವೀಟ್ ಒಂದನ್ನು ಮಾಡಿ, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿಕೊಂಡಿದ್ದರು.
ಆದರೆ, ಅಮೆರಿಕ ಕದನ ವಿರಾಮ ನಡೆಸಿರುವುದನ್ನು ಭಾರತ ಸಾರಾಸಗಾಟವಾಗಿ ತಿರಸ್ಕರಿಸಿತ್ತು. ಸಂಸತ್ತಿನಲ್ಲೂ, ಅಮೆರಿಕ ಮಧ್ಯ ಪ್ರವೇಶಿಸಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಹೇಳಿದ್ದರು. ಆದರೂ, ಅಲ್ಲಿಂದ ಇಲ್ಲಿಯವರೆಗೆ ದಿನ ಬೆಳಗಾದರೆ, ಕದನ ವಿರಾಮ ಮಾಡಿದ್ದು ನಾನೇ ಎಂದು ಟ್ರಂಪ್ ಬಡಾಯಿ ಕೊಚ್ಚಿಕೊಂಡು ಬರುತ್ತಲೇ ಇದ್ದಾರೆ. ಆದರೆ, ಈ ಕ್ರೆಡಿಟ್ ಕೊಡಲು ಭಾರತ ಒಪ್ಪದ ಹಿನ್ನಲೆಯಲ್ಲಿ, ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ಸಿಟ್ಟಾಗಿರುವ ಸಾಧ್ಯತೆಯಿದೆ.
