Bhavana Ramanna: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ಚಿತ್ರಗಳ ಮೂಲಕ ಗುರುತಿಸಿಕೊಂಡ ನಟಿ ಭಾವನ ರಾಮಣ್ಣ ಸದ್ಯ IVF ಮೂಲಕ ಗರ್ಭವತಿಯಾಗಿದ್ದು ರಾಜ್ಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೆಲ್ಲದರ ನಡುವೆ ನಟಿ ಭಾವನ ರಾಮಣ್ಣ ಅವರಿಗೆ ಅವಳಿ ಮಕ್ಕಳು ಜನಿಸಿದ್ದವು. ಆದರೆ ಭಾವನ ಅವರಿಗೆ ಮಗು ಜನಿಸಿದ ಖುಷಿ ಹೆಚ್ಚು ಇರಲಿಲ್ಲ. ಯಾಕೆಂದರೆ ಅವರ ಅವಳಿ ಮಕ್ಕಳಲ್ಲಿ ಒಂದು ಮಗು ಜನನವಾದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿತು. ಇದೀಗ ಆ ಒಂದು ನೋವಿನ ಅನುಭವವನ್ನು ಭಾವನ ತೆರೆದಿಟ್ಟಿದ್ದಾರೆ.
ಹೌದು, ಭಾವನಾ ಅವರಿಗೆ ಅವಳಿ ಮಕ್ಕಳ ಪೈಕಿ ಒಂದು ಮಗು ಮಾತ್ರ ಜನಿಸಿದೆ. ಮತ್ತೊಂದು ಮಗು ಮೃತಪಟ್ಟಿದೆ. ಸೀಮಂತದ ಬಳಿಕ ಏನಾಯ್ತು, ಆಸ್ಪತ್ರೆಯಲ್ಲಿ ನಡೆದಿದ್ದೇನು, ಮಗುವನ್ನ ಕಳ್ಕೊಂಡ ಕರಾಳ ಅನುಭವವನ್ನ ನಟಿ ಭಾವನಾ ರಾಮಣ್ಣ ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ನೀಡಿರುವ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
“ಆ ನೋವನ್ನು ಸಹಿಸುವುದು ಇಂದಿಗೂ ನನಗೆ ಕಷ್ಟವಾಗುತ್ತಿದೆ. ನನ್ನ ಪ್ರೆಗ್ನೆನ್ಸಿ ಜರ್ನಿ ಚೆನ್ನಾಗಿಯೇ ಇತ್ತು. ಆದರೆ, ಸೀಮಂತ ಮುಗಿದ ಮೇಲೆ ಹೆಚ್ಚು ಹೊತ್ತು ಕೂರಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆನಂತರ ಕೊಂಚ ರಕ್ತಸ್ರಾವ ಶುರುವಾಯಿತು. ನಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ಕೊಂಚ ದೂರ ಇತ್ತು. ಹೀಗಾಗಿ, ಫ್ಯಾಮಿಲಿಯ ಸಲಹೆ ಮೇರೆಗೆ ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ತೆರಳಿದ್ವಿ. ಅಲ್ಲಿನ ಡಾಕ್ಟರ್ ನಮ್ಮ ಸಂಬಂಧಿಕರ ಹೆರಿಗೆಯನ್ನೂ ಮಾಡಿಸಿದ್ದಾರೆ. ಆ ವೈದ್ಯರು ನನ್ನನ್ನ ನೋಡುತ್ತಿದ್ದ ಹಾಗೆ ‘ಭಾವನಾ ನೀವು ಟೈಮ್ ಬಾಂಬ್ ಮೇಲೆ ಕೂತಿದ್ದೀರಿ’ ಎಂದುಬಿಟ್ಟರು. ‘ಮುಂದಿನ ಕೆಲವು ಗಂಟೆಗಳು ಕ್ರಿಟಿಕಲ್’ ಅಂತಲೂ ಹೇಳಿದ್ದರು”
“ಡಾಕ್ಟರ್ ಕೆಲವು ಟೆಸ್ಟ್‌ಗಳನ್ನ ಮಾಡಿದರು. ಆನಂತರ ಮಗುವಿಗೆ ರಕ್ತ ಪೂರೈಸುವ ನಾಳ (umbilical cord) ರಿವರ್ಸ್ ಹರಿಯುತ್ತಿದೆ ಎಂಬುದು ಗೊತ್ತಾಯಿತು. ಒಂದು ಮಗುವಿನ ಹೃದಯ ಬಡಿತ ಅದಾಗಲೇ ಶೇ. 50 ರಷ್ಟಕ್ಕೆ ಇಳಿದುಹೋಗಿತ್ತು. ಇನ್ನೊಂದು ಮಗು ಆರೋಗ್ಯವಾಗಿತ್ತು. ಹಾಗೇ, ಒಂದು ಮಗುವಿನ ತೂಕ ಅಂಡರ್‌ವೇಯ್ಟ್ ಇದೆ ಎಂಬುದೂ ಗೊತ್ತಾಯಿತು. ಮಗುವಿನ ಆರೋಗ್ಯ ಸುಧಾರಿಸಲಿ ಅಂತ ನಾವು ಪ್ರಾರ್ಥಿಸಿದ್ವಿ. ಆದರೆ, ಸುಧಾರಿಸಲೇ ಇಲ್ಲ. ತುರ್ತು ಶಸ್ತ್ರಚಿಕಿತ್ಸೆಗೆ ನಾವು ಒಳಗಾಗಬೇಕಾಯಿತು. ಮಾನಿಟರ್‌ನಲ್ಲಿ ಒಂದು ಮಗುವಿನ ಹೃದಯ ಬಡಿತ ಸೊನ್ನೆಯತ್ತ ಕುಸಿಯುತ್ತಿರುವುದನ್ನು ನೋಡಿದಾಗ ನನಗಾದ ಆಘಾತವನ್ನ ವಿವರಿಸಲು ಸಾಧ್ಯವೇ ಇಲ್ಲ. ಒಂದು ಮಗುವನ್ನ ಉಳಿಸಲು ಆಗಲಿಲ್ಲ ಅಂತ ವೈದ್ಯರು ಹೇಳಿಬಿಟ್ಟರು. ಇನ್ನೊಂದು ಮಗುಗಾಗಿ ಫುಲ್ ಟರ್ಮ್ ಕಾಯುವ ಪರಿಸ್ಥಿತಿಯೂ ಇರಲಿಲ್ಲ. ಹೀಗಾಗಿ, 32 ವಾರಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು” ಎಂದು ಕರಾಳ ಘಟನೆಯನ್ನ ಬಿಚ್ಚಿಟ್ಟಿದ್ದಾರೆ ಭಾವನಾ ರಾಮಣ್ಣ.
ಇದನ್ನೂ ಓದಿ:Life style: ಮನೆಯಲ್ಲಿ ಗೆದ್ದಲುಗಳು ಬರದಂತೆ ಮಾಡಲು ಇಲ್ಲಿದೆ ಟಿಪ್ಸ್!
