Police Recruitment: ರಾಜ್ಯದಲ್ಲಿ ಪೊಲೀಸ್ ಪೇದೆ ಮತ್ತು ಪೊಲೀಸ್ ಉಪ ನಿರೀಕ್ಷಕ (ಪಿಎಸ್‌ಐ) ಹುದ್ದೆಗಳ ನೇಮಕಾತಿ ಕುರಿತು ಒಂದು ಬಾರಿ ವಯೋಮಿತಿ ಸಡಿಲ ಮಾಡಲು ಸರಕಾರ ನಿರ್ಧಾರ ಮಾಡಿದ್ದು, ಈ ಕುರಿತು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಎಸ್‌ಐ ಮತ್ತು ಪೇದೆ ಹುದ್ದೆಗಳ ನೇರ ನೇಮಕಾತಿಗೆ ವಯೋಮಿತಿ ಸಡಿಲಿಕೆಗೆ ಸಂಬಂಧಪಟ್ಟಂತೆ ಹಲವು ವರ್ಷಗಳಿಂದ ಆಗ್ರಹ ಮಾಡಲಾಗುತ್ತಿತ್ತು. ಈಗ ಇದಕ್ಕೆ ಅನುಮೋದನೆ ದೊರಕಿದೆ. ವಯೋಮಿತಿ ಸಡಿಲಿಕೆ ಕುರಿತು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಈ ಮೂಲಕ ಪಿಎಸ್‌ಐ ಹುದ್ದೆ ನೇಮಕಾತಿಯ ಗರಿಷ್ಠ ವಯೋಮಿತಿ ಎಸ್ಸಿ/ಎಸ್ಟಿ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 30 ರಿಂದ 32 ವರ್ಷಕ್ಕೆ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳ ವಯೋಮಿತಿ 28 ರಿಂದ 30 ವರ್ಷಕ್ಕೆ ಪರಿಷ್ಕರಿಸಲಾಗುತ್ತಿದೆ. ಅದೇ ರೀತಿ ಪೇದೆ ಹುದ್ದೆಗಳ ಗರಿಷ್ಠ ವಯೋಮಿತಿ ಎಸ್ಸಿ/ಎಸ್ಟಿ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 27 ರಿಂದ 30 ವರ್ಷಕ್ಕೆ ಹಾಗೂ ಇತರ ವರ್ಗದವರಿಗೆ 25 ರಿಂದ 27 ವರ್ಷಕ್ಕೆ ಪರಿಷ್ಕರಣೆ ಮಾಡಲಾಗುತ್ತಿದೆ.
ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಪರಿಷ್ಕರಣೆ ಮಾಡಿದ ನಂತರ ವಯೋಮಿತಿ ಸಡಿಲಿಕೆ ಆದೇಶ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಆದೇಶ ಕೆಎಸ್‌ಆರ್‌ಪಿ, ನಾಗರಿಕ, ಸಶಸ್ತ್ರ ಮೀಸಲುಪಡೆ ಸೇರಿ ಎಲ್ಲಾ ವಿಭಾಗಕ್ಕೆ ಅನ್ವಯವಾಗಲಿದೆ.
ಸದ್ಯಕ್ಕೆ ರಾಜ್ಯದಲ್ಲಿ ಕೆಎಸ್‌ಆರ್‌ಪಿ, ನಾಗರಿಕ, ಸಶಸ್ತ್ರ ಮೀಸಲು ಪಡೆ ಸೇರಿ ಮತ್ತಿತರ ವಿಭಾಗದಲ್ಲಿ 10000 ಕ್ಕೂ ಹೆಚ್ಚಿನ ಹುದ್ದೆ ಖಾಲಿ ಇದೆ ಎನ್ನಲಾಗಿದೆ. ಈಗಾಗಲೇ 600 ಪಿಎಸ್‌ಐ ಹುದ್ದೆಗಳನ್ನು ಎರಡು ಭಾಗಗಳಾಗಿ ನೇಮಿಸುವ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡುವಂತೆ ಗೃಹ ಸಚಿವರು ನಿರ್ದೇಶಿಸಿದ್ದಾರೆ ಎಂದು ಹೇಳಲಾಗಿದೆ.
ಗೃಹ ಇಲಾಖೆಯಲ್ಲಿ ಎ ದರ್ಜೆಯ 4,090 ಹುದ್ದೆಗಳು, ಬಿ ದರ್ಜೆಯ 128, ಸಿ ದರ್ಜೆಯ 23,076 ಮತ್ತು ಡಿ ದರ್ಜೆಯ 1,896 ಸೇರಿದಂತೆ 26,168 ಹುದ್ದೆಗಳು ಖಾಲಿ ಇವೆ. ವಯೋಮಿತಿ ಸಡಿಲಿಕೆ ಮತ್ತು ಒಳಮೀಸಲಾತಿ ಗೊಂದಲ ಬಗೆಹರಿದಿರುವ ಹಿನ್ನೆಲೆ ನೇಮಕಾತಿ ಶೀಘ್ರದಲ್ಲಿ ಆರಂಭವಾಗುವ ಸಾಧ್ಯತೆಗಳಿವೆ.
ಪೇದೆ ಮತ್ತು ಪಿಎಸ್‌ಐ ಹುದ್ದೆಗಳ ನೇಮಕಾತಿ ಗರಿಷ್ಠ ವಯೋಮಿತಿ ಸಡಿಲಿಕೆಗೆ ಸಂಬಂಧಿಸಿ ಈ ಹಿಂದೆ ನೀಡಲಾಗಿದ್ದ ಭರವಸೆ ಈಡೇರಿಸಲಾಗುತ್ತಿದೆ. ವಯೋಮಿತಿ ಸಡಿಲಿಕೆ ಅಧಿಕೃತ ಆದೇಶದಿಂದಾಗಿ ಸಾವಿರಾರು ಯುವಕರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ದೊರೆಯಲಿದೆ. ಅಲ್ಲದೆ, ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆಯನ್ನೂ ಆರಂಭಿಸಲಾಗುವುದು.
ಡಾ.ಜಿ.ಪರಮೇಶ್ವರ, ಗೃಹ ಸಚಿವ
