ತೀರ್ಥಹಳ್ಳಿ: ಕೊಠಡಿಯಲ್ಲಿ ಪತಿಯೊಂದಿಗೆ ತಂಗಿದ್ದ ಮಹಿಳೆಗೆ ಮಂಚದ ಕೆಳಗೆ ಅವಿತು ಮಲಗಿದ್ದ ಪುರುಷನೊಬ್ಬ ನಡುರಾತ್ರಿ ಕೈಯಾಡಿಸಿದ ಘಟನೆ ನಡೆದಿದೆ. ಈ ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ದಂಪತಿಗಳು ಇತ್ತೀಚೆಗೆ ತೀರ್ಥಹಳ್ಳಿ ಪಟ್ಟಣದ ಕುವೆಂಪು ಲೇಔಟ್ ನ ಮನೆಯಲ್ಲಿ ತಂಗಿದ್ದರು. ಅವರು ಕೊಠಡಿಯಲ್ಲಿ ಮಲಗಿದ್ದಾಗ ರಾತ್ರಿ ಸುಮಾರು 12.30ರ ಹೊತ್ತಿಗೆ ಮಂಚದ ಕೆಳಗಿನಿಂದ ವ್ಯಕ್ತಿಯೊಬ್ಬ ಮಹಿಳೆಯ ಮೈಮೇಲೆ ಕೈ ಹಾಕಿದ, ಅಲ್ಲಲ್ಲಿ ಮುಟ್ಟಿದ ಅನುಭವವಾಗಿದೆ. ಮಹಿಳೆ ತನ್ನ ಪತಿಗೆ ವಿಷಯ ತಿಳಿಸಿದ್ದು, ಅವರು ಪರಿಶೀಲಿಸಿದಾಗ ಮಂಚದ ಅಡಿಯಿಂದ ಆಕೃತಿಯೊಂದು ಎದ್ದು ಹೊರಕ್ಕೆ ಓಡಿದೆ.
ಮಂಚದ ಕೆಳಗೆ ಅವಿತು ಮಲಗಿದ್ದ ವ್ಯಕ್ತಿಯೊಬ್ಬ ಬಾಗಿಲು ತೆಗೆದು ಹೊರಗೆ ಹೋಗಿದ್ದಾನೆ ಎಂದು ದಂಪತಿಗಳು ಆರೋಪಿಸಿದ್ದಾರೆ. ವಿಚಿತ್ರವೆಂಬಂತೆ ಅಪರಿಚಿತ ವ್ಯಕ್ತಿಯು ಮಹಿಳೆಯರು ಧರಿಸುವ ಫ್ರಾಕ್ ಧರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
