B.R.Shetty: ಯುಎಇಯ ಎನ್ಎಂಸಿ ಹೆಲ್ತ್ಕೇರ್ ಗ್ರೂಪ್ ಸಂಸ್ಥಾಪಕ ಬಿ.ಆರ್.ಶೆಟ್ಟಿ ಅವರಿಗೆ ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ 408.5 ಕೋಟಿ ರೂ (168.7 ಮಿಲಿಯನ್ ದಿರ್ಹಮ್) ಪಾವತಿ ಮಾಡುವಂತೆ ದುಬೈ ಇಂಟರ್ನ್ಯಾಷನಲ್ ಫೈನಾನ್ಸಿಯಲ್ ಸೆಂಟರ್ ನ್ಯಾಯಾಲಯ ಆದೇಶಿಸಿದೆ.
50 ಮಿಲಿಯನ್ ಡಾಲರ್ ಸಾಲದ ಗ್ಯಾರಂಟಿಗೆ ಸಹಿ ಹಾಕಿರುವ ಕುರಿತು ಶೆಟ್ಟಿ ಅವರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಪತ್ತೆಯಾದ ನಂತರ ಈ ತೀರ್ಪು ಹೊರಡಿಸಲಾಗಿದೆ. ಅ.18 ರಂದು ನ್ಯಾಯಾಧೀಶ ಆಂಡ್ರ ಮೋರಾನ್ ಅವರು, ಶೆಟ್ಟಿ ಅವರ ಸಾಕ್ಷ್ಯವನ್ನು “ಅವಿಶ್ವಾಸಾರ್ಹ ಸುಳ್ಳುಗಳ ಸರಮಾಲೆ ಮತ್ತು ಗೊಂದಲಭರಿತ” ಎಂದು ವಿಮರ್ಶೆ ಮಾಡಿದರು.
ನ್ಯಾಯಾಲಯದ ಪ್ರಕಾರ, ಡಿ.2018 ರಲ್ಲಿ ಶೆಟ್ಟಿ ವರು ಗ್ಯಾರಂಟಿಗೆ ಸಹಿ ಮಾಡಿದ್ದಕ್ಕೆ ಹಲವು ಸಾಕ್ಷಿಗಳು ದೊರಕಿದ್ದು, ಹಾಗಾಗಿ ಶೆಟ್ಟಿ ಅವರು ಇದಕ್ಕೆ ವೈಯಕ್ತಿಕ ಹೊಣೆಗಾರರಾಗುತ್ತಾರೆ.
ನಾನು ಬ್ಯಾಂಕ್ನ ಸಿಇಓ ಅವರನ್ನು ಭೇಟಿ ಮಾಡಿಲ್ಲ. ಯಾವುದೇ ದಾಖಲೆಗೆ ಸಹಿ ಹಾಕಿಲ್ಲ. ನನ್ನ ಸಹಿಯನ್ನು ನಕಲು ಮಾಡಲಾಗಿದೆ ಎಂದು ಶೆಟ್ಟಿ ಅವರು ವಾದ ಮಾಡಿದ್ದರು. ಆದರೆ ಫೋಟೋಗಳು ಇಮೇಲ್ಗಳು ಸೇರಿ ಸಲ್ಲಿಸಲಾದ ದಾಖಲೆಗಳು ಶೆಟ್ಟಿ ಅವರ ಹೇಳಿಕೆಗೆ ವಿರುದ್ಧವಾಗಿದೆ.
ಅಂದಿನ ಸಿಇಓ ಆಗಿರುವ ಅನಂತ ಶೆಣೈ ಅವರು, ನನ್ನ ಎದುರಿನಲ್ಲೇ ಗ್ಯಾರಂಟಿ ದಾಖಲೆಗೆ ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೆ. ಶೆಟ್ಟಿ ಅವರು ಬ್ಯಾಂಕ್ನ ಹಿರಿಯ ಅಧಿಕಾರಿಗಳ ಜೊತೆಗಿರುವ ಫೋಟೋವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
