SSY: ಹೆತ್ತವರಿಗೆ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕೆಂಬುದು ಮಹಾದಾಸೆ. ಅದರಲ್ಲೂ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಸಾಕಷ್ಟು ಕನಸು ಕಂಡಿರುತ್ತಾರೆ. ಹೀಗಾಗಿ ದುಡಿದ ಒಂದಿಷ್ಟು ಮೊತ್ತವನ್ನು ಬ್ಯಾಂಕಿನಲ್ಲೋ, ಪೋಸ್ಟ್ ಆಫೀಸ್‌ನಲ್ಲೋ (Post Office), ಚಿನ್ನದ ಮೇಲೆ ಹೂಡಿಕೆ ಮಾಡಿಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿದೆ. ಆದರೆ ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ 21 ವರ್ಷಕ್ಕೆ ನಿಮ್ಮ ಮಗಳನ್ನು ಲಕ್ಷಾಧಿಪತಿಯನ್ನಾಗಿಸಬಹುದು.
ಹೌದು, ಮಕ್ಕಳು ದೊಡ್ಡವರಾದಂತೆ ಶಿಕ್ಷಣ, ಮದುವೆ ಅನ್ನೋ ಖರ್ಚುಗಳೇ ಜಾಸ್ತಿಯಾಗುತ್ತದೆ. ಆದ್ದರಿಂದ ಮಗಳು ಚೆನ್ನಾಗಿ ಓದ್ಬೇಕು, ಮದುವೆ ಭರ್ಜರಿಯಾಗಿ ಮಾಡ್ಬೇಕು ಅನ್ನೋ ಕನಸು ಇಟ್ಟುಕೊಂಡವರಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ (SSY) ಒಂದು ಅತ್ಯುತ್ತಮ ಮಾರ್ಗವಾಗಿದೆ. 10 ವರ್ಷದ ಕೆಳಗಿನ ಹೆಣ್ಣುಮಕ್ಕಳ ಹೆಸರಲ್ಲಿ ಮಾತ್ರ ಈ ಯೋಜನೆಯಲ್ಲಿ ಖಾತೆ ತೆರೆಯಬಹುದು. ಹೆಣ್ಣುಮಕ್ಕಳ ಶಿಕ್ಷಣ, ಮದುವೆಯ ಆರ್ಥಿಕ ನೆರವಿಗೆ ಇದು ಪ್ರಯೋಜನವಾಗಲಿದೆ.
ಸುಕನ್ಯಾ ಸಮೃದ್ಧಿ ಯೋಜನೆ ತೆರೆದರೆ ವಾರ್ಷಿಕವಾಗಿ ಕನಿಷ್ಠ ₹250 ರೂ. ಹೂಡಿಕೆ ಮಾಡಿದ್ರೆ ಸಾಕು. ಆದರೆ ನೀವು ಗರಿಷ್ಠ ಮೊತ್ತ ಅಂದರೆ 1.5 ಲಕ್ಷದವರೆಗೂ ಹೂಡಿಕೆ ಮಾಡಬಹುದು. ಅಲ್ಲದೇ ನೀವಿಲ್ಲಿ ಒಮ್ಮೆಲೇ ಹೂಡಿಕೆ ಮಾಡಬಹುದು ಅಥವಾ ಕಂತುಗಳಲ್ಲೂ ಹೂಡಿಕೆ ಮಾಡಬಹುದು. ಅಲ್ಲದೇ ಈ ಯೋಜನೆಯಲ್ಲಿ ಕೇವಲ 15 ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ. ಆ ನಂತರದ 6 ವರ್ಷಗಳವರೆಗೆ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಬಡ್ಡಿ ಸೇರುತ್ತದೆ. ಪ್ರಸ್ತುತ, ಸುಕನ್ಯಾ ಸಮೃದ್ಧಿ ಯೋಜನೆಗೆ ವಾರ್ಷಿಕವಾಗಿ 8.2% ಬಡ್ಡಿದರ ನೀಡಲಾಗುತ್ತಿದೆ.
ಉದಾಹರಣೆಗೆ ಹೇಳುವುದಾದರೆ ನೀವು ಪ್ರತಿ ತಿಂಗಳು ₹1,000 ಹೂಡಿಕೆ ಮಾಡಿದರೆ ವಾರ್ಷಿಕವಾಗಿ 12 ಸಾವಿರ ರೂಪಾಯಿ ಆಗುತ್ತದೆ. ಅಂದರೆ 15 ವರ್ಷಗಳಲ್ಲಿ ಒಟ್ಟು 1.8 ಲಕ್ಷ ರೂ. ಹೂಡಿಕೆ ಮಾಡದಂತಾಗುತ್ತದೆ. ನೀವು ಹೂಡಿಕೆ ಮಾಡಿದ ಮೊತ್ತಕ್ಕೆ 3.74 ಲಕ್ಷ ಬಡ್ಡಿ ಬರುತ್ತದೆ. ಈ ಮೂಲಕ ನೀವು 21 ವರ್ಷ ತುಂಬುವ ಹೊತ್ತಿಗೆ ಒಟ್ಟು ₹5.54 ಲಕ್ಷ ನಿಮ್ಮ ಖಾತೆಗೆ ಸೇರುತ್ತದೆ.
