Hindu Gods: ಹಿಂದೂ ದೇವತೆಗಳು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಾಲಕಿ ರೀಲ್ಸ್ ಪೋಸ್ಟ್ ಮಾಡಿದ್ದಕ್ಕೆ ಆಕೆಯ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಪ್ರಾಪ್ತೆಯನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಫಾಲೋವರ್ಸ್ ಹೆಚ್ಚಾಗಲೆಂದು ಬಾಲಕಿ ಈ ಅಪರಾಧ ಎಸಗಿದ್ದಾಳೆ. ಸುಮಾರು ಒಂದು ನಿಮಿಷದ ಈ ವಿಡಿಯೋವನ್ನು ಅ.27 ರಂದು ಬಾಲಕಿ ಪೋಸ್ಟ್ ಮಾಡಿದ್ದಳು.
ವೀಡಿಯೋದಲ್ಲಿ ಆಕೆ ಹಿಂದೂ ದೇವರನ್ನು ಟೀಕಿಸಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಈಕೆ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಅನೇಕ ಹಿಂದೂ ಸಂಘಟನೆಗಳು ಬಾಲಕಿ ಮತ್ತು ಆಕೆಯ ಕುಟುಂಬದ ವಿರುದ್ಧ ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದವು.
ದೂರನ್ನು ಆಧರಿಸಿ ಪೊಲೀಸರು ಬಾಲಕಿ ಮತ್ತು ಪೋಷಕರನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದಾರೆ. ಪ್ರಕರಣ ಸಂಬಂಧ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು, ಆತನ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಹದಿಹರೆಯದ ಬಾಲಕಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ತನ್ನ ಕೃತ್ಯಕ್ಕೆ ಕ್ಷಮೆಯಾಚಿಸುವ ವೀಡಿಯೋ ಕೂಡ ಹೊರಬಿದ್ದಿದೆ. ‘ನಾನು ವೀಡಿಯೋ ಮಾಡುವ ಮೂಲಕ ತಪ್ಪು ಮಾಡಿದೆ. ಕ್ಷಮೆಯಾಚಿಸುತ್ತೇನೆ. ನಾನು ಮತ್ತೆಂದೂ ಅಂತಹ ತಪ್ಪನ್ನು ಮಾಡುವುದಿಲ್ಲ. ಜನರು ವಿಡಿಯೋವನ್ನು ವೈರಲ್ ಮಾಡಬೇಡಿ ಎಂದು ನಾನು ವಿನಂತಿಸುತ್ತೇನೆ ಎಂದು ಆಕೆ ತಿಳಿಸಿದ್ದಾರೆ.
