Home » Udupi: ನ.28 ರಂದು ಉಡುಪಿಯಲ್ಲಿ ಪ್ರಧಾನಿ ಮೋದಿ: ಭಕ್ತರ ಜೊತೆ ಭಗವದ್ಗೀತೆ ಶ್ಲೋಕ ಪಠಣ

Udupi: ನ.28 ರಂದು ಉಡುಪಿಯಲ್ಲಿ ಪ್ರಧಾನಿ ಮೋದಿ: ಭಕ್ತರ ಜೊತೆ ಭಗವದ್ಗೀತೆ ಶ್ಲೋಕ ಪಠಣ

0 comments

PM Modi: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶನಿವಾರದಿಂದ ಒಂದು ತಿಂಗಳ ಕಾಲ ಬೃಹತ್‌ ಗೀತೋತ್ಸವ ಕಾರ್ಯಕ್ರಮ ನಡೆಯಲಿದೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉತ್ಸವ ಉದ್ಘಾಟಿಸಲಿದ್ದಾರೆ.

ನವೆಂಬರ್‌ 28 ರಂದು ನಡೆಯುವ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಭಗವದ್ಗೀತೆಯ 10 ಶ್ಲೋಕ ಪಠಣ ಮಾಡಲಿದ್ದಾರೆ. ನವೆಂಬರ್‌ 30 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ನ.28 ರಂದು ಮಧ್ಯಾಹ್ನ 12 ಗಂಟೆಗೆ ಮೋದಿ ಕೃಷ್ಣಮಠಕ್ಕೆ ಆಗಮಿಸಲಿದ್ದಾರೆ. ಸುಮಾರು 2.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಚಿನ್ನದ ಹೊದಿಕೆಯ ಸುವರ್ಣ ತೀರ್ಥ ಮಂಟಪ ಮತ್ತು ಕನಕನ ಕಿಂಡಿ ಉದ್ಘಾಟಿಸಲಿದ್ದಾರೆ. ನಂತರ ಭಗವದ್ಗೀತೆ ಪಠಣ ಮಾಡುತ್ತಿರುವ ಒಂದು ಲಕ್ಷ ಭಕ್ತರೊಂದಿಗೆ ಕೊನೆಯ 10 ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ. ಮಠದ ಬಳಿಯ ವಿಶಾಲ ಗದ್ದೆಯಲ್ಲಿ ಗಾಯನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.

ನವೆಂಬರ್‌ 30 ರಂದು ಸಂತ ಸಂಗಮ ಮತ್ತು ಭಜನೋತ್ಸವ ನಡೆಯಲಿದೆ. ನಾಡಿನ ವಿವಿಧ ಮಠಾಧಿಪತಿಗಳು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾಗವಹಿಸಲಿದ್ದಾರೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ವೈಭವದ ಶೋಭಾ ಯಾತ್ರೆ, ಸಂಜೆ 4 ಗಂಟೆಗೆ ಸಾಮೂಹಿಕ ಭಜನೋತ್ಸವ ನಡೆಯಲಿದೆ. ರಾಜ್ಯ ಮತ್ತು ರಾಷ್ಟ್ರ ನಾಯಕರು ಕೂಡಾ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

You may also like