Black Thread: ಅನೇಕ ಹುಡುಗ ಹುಡುಗಿಯರು ತಮ್ಮ ಕೈ ಅಥವಾ ಕಾಲುಗಳಿಗೆ ಕಪ್ಪು ದಾರಗಳನ್ನು ಕಟ್ಟಿಕೊಂಡಿರುತ್ತಾರೆ. ಅವರ ಬಳಿ ಯಾಕೆ ಕಟ್ಟಿಕೊಂಡಿದ್ದೀರಿ ಎಂದು ಕೇಳಿದಾಗ ಗೊತ್ತಿಲ್ಲ, ಮನೆಯಲ್ಲಿ ಹೇಳಿದರು ಅದಕ್ಕೆ ಕಟ್ಟಿಕೊಂಡೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಇದನ್ನು ಕಟ್ಟಿದರೆ ದೃಷ್ಟಿ ತಾಕುವುದಿಲ್ಲ ಎಂದು ಹೇಳುವುದುಂಟು. ಆದರೆ ಈ ರೀತಿ ಕಪ್ಪು ದಾರ ಕಟ್ಟಿಕೊಳ್ಳುವುದು ಏಕೆ ಎಂಬುದು ನಿಮಗೆ ಗೊತ್ತೇ? ಇದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಎಂಬುದನ್ನು ತಿಳಿಯೋಣ.
ವಾಸ್ತವವಾಗಿ ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ಶನಿ ದೋಷದ ಪ್ರಭಾವ ಕಡಿಮೆಯಾಗುತ್ತದೆ. ಆದ್ದರಿಂದ ಶನಿವಾರ ಶನಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಶುಭವಾಗಲಿದೆ ಎಂಬ ನಂಬಿಕೆ ಇದೆ. ಇನ್ನೂ ಜಾತಕಕ್ಕೆ ಅನುಸಾರವಾಗಿ ರಾಹು ಕೇತುವಿನ ದೋಷವಿದ್ದರೆ, ಕಪ್ಪು ದಾರ ಧರಿಸುವುದರಿಂದ ಪರಿಹಾರ ಸಿಗುತ್ತದೆ. ಇದರಿಂದ ವೈವಾಹಿಕ ಜೀವನ ಹಾಗೂ ಆರ್ಥಿಕ ಸಮಸ್ಯೆಯೂ ಬಗೆ ಹರಿಯುತ್ತದೆ ಎಂಬ ನಂಬಿಕೆಯುಂಟು.
ಅಲ್ಲದೆ ಕಪ್ಪು ದಾರವನ್ನು ಪುರುಷರು ಬಲಗಾಲಿಗೆ ಹಾಗೂ ಹೆಣ್ಣು ಮಕ್ಕಳು ಎಡಗಾಲಿಗೆ ಕಟ್ಟಿಕೊಳ್ಳುವುದು ಒಳಿತು ಎಂಬ ನಂಬಿಕೆ ಇದೆ. ಚಿಕ್ಕ ಮಕ್ಕಳು ವಿನಾಕಾರಣ ಅಳುತ್ತಿದ್ದರೆ, ಪದೇ ಪದೇ ಅನಾರೋಗ್ಯಕ್ಕೆ ತುತ್ತಾದಾಗ ಕಪ್ಪು ದಾರವನ್ನು ಕಟ್ಟಲಾಗುತ್ತದೆ. ಕಪ್ಪು ದಾರವು ದೃಷ್ಟಿ ನಿವಾರಣೆ ಮಾಡುತ್ತದೆ ಎಂಬ ನಂಬಿಕೆ ಇದೆ.
