Karnataka Gvt : ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೇಮಕಾತಿಯನ್ನು 2028ರ ವೇಳೆಗೆ ಸಂಪೂರ್ಣವಾಗಿ ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹೌದು, ವೇತನ, ಪಿಎಫ್ (ಪ್ರಾವಿಡೆಂಟ್ ಫಂಡ್), ಇಎಸ್‌ಐ ಮತ್ತು ಇತರ ಸವಲತ್ತುಗಳ ಪಾವತಿಯಲ್ಲಿ ವಿಳಂಬದ ಜೊತೆಗೆ ಕಡಿಮೆ ಪಾವತಿ ಮೂಲಕ ಹೊರಗುತ್ತಿಗೆ ಸಿಬ್ಬಂದಿಯನ್ನು ಖಾಸಗಿ ಏಜೆನ್ಸಿಗಳು ಶೋಷಣೆ ಮಾಡುತ್ತಿವೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೇಮಕಾತಿಯನ್ನು 2028ರ ವೇಳೆಗೆ ಸಂಪೂರ್ಣವಾಗಿ ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ಹೊರಗುತ್ತಿಗೆ ನಿಷೇಧ ಮಸೂದೆ- 2025′ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮಸೂದೆಯ ಕರಡು ಸಿದ್ಧವಾಗಿದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.
ಹೊಸ ಕಾಯ್ದೆ ಜಾರಿಯಾದ ಬಳಿಕ, ನಿಯಮ ಉಲ್ಲಂಘಿಸಿ ಹೊರಗುತ್ತಿಗೆಯಡಿ ನೇಮಕಾತಿ ಮಾಡಿದರೆ ಅಥವಾ ನಿಗದಿತ ಅವಧಿಯನ್ನು ಮೀರಿ ಹೊರಗುತ್ತಿಗೆ ಒಪ್ಪಂದ ಮುಂದುವರಿಸಿದರೆ, ಅಂಥವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 5 ಲಕ್ಷ ದಂಡ ವಿಧಿಸಲು ಕೂಡಾ ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
