ಪುತ್ತೂರು/ ಬಂಟ್ವಾಳ: ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪ ಇಂದು ನಡೆದಿದೆ.
ಅಪಘಾತದಲ್ಲಿ ಪುತ್ತೂರು ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ ರಾವ್, ಅವರ ಪತ್ನಿ, ಪಡುಮಲೆ ದೇವಸ್ಥಾನದ ಮೋಕ್ತೇಸರರಾದ ಉದಯ ಭಟ್ ಹಾಗೂ ಮಗು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿರುವ ಕುರಿತು ವರದಿಯಾಗಿದೆ.
ಇಂದು ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಈ ಅಪಘಾತ ನಡೆದಿದ್ದು, ಕಾರು ಮಂಗಳೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ವೇಳೆ ಮೆಲ್ಕಾರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ವೇಗಕ್ಕೆ ಕಾರಿನ ಮುಂಭಾಗ ಅಪ್ಪಚ್ಚಿಯಾಗಿತ್ತು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಅವರು ಇದೇ ಮಾರ್ಗದಲ್ಲಿ ಬರುತ್ತಿದ್ದು, ಕಾರನ್ನು ಮತ್ತು ಗಾಯಾಳುಗಳನ್ನು ಗಮನಿಸಿ ಅವರು ಕೂಡಲೇ ತಮ್ಮ ವಾಹನ ನಿಲ್ಲಿಸಿ ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳೀಯರ ನೆರವಿನ ಮೂಲಕ ತಮ್ಮ ಕಾರಿನಲ್ಲಿ ಬಿಸಿರೋಡಿನ ಆಸ್ಪತ್ರೆಗೆ ಸಾಗಿಸುವ ಮೂಲಕ ಆಳ್ವ ಅವರು ಮಾನವೀಯತೆ ಮೆರೆದಿದ್ದಾರೆ.
