Home » ದೇವಾಲಯದ ಹಣ ದೇವರಿಗೆ ಮಾತ್ರ ಸೇರಿದ್ದು; ಬೇರೆ ಉದೇಶಕ್ಕೆ ಬಳಸುವಂತಿಲ್ಲ: ಸುಪ್ರೀಂ ಕೋರ್ಟ್

ದೇವಾಲಯದ ಹಣ ದೇವರಿಗೆ ಮಾತ್ರ ಸೇರಿದ್ದು; ಬೇರೆ ಉದೇಶಕ್ಕೆ ಬಳಸುವಂತಿಲ್ಲ: ಸುಪ್ರೀಂ ಕೋರ್ಟ್

0 comments

ನವದೆಹಲಿ: ದೇವಾಲಯದ ಹಣ ದೇವರಿಗೆ ಮಾತ್ರ ಸೇರಿದ್ದು, ಬೇರೆ ಉದ್ದೇಶಕ್ಕೆ ಬಳಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಡಿ.05 ರಂದು) ಅಭಿಪ್ರಾಯಪಟ್ಟಿದೆ. ಕೇರಳದ ತಿರುನೆಲ್ಲಿ ದೇವಾಲಯದ ದೇವಸ್ವಂ ಠೇವಣಿಗಳನ್ನು ವಾಪಸ್ ಮಾಡಲು ಕೆಲ ಸಹಕಾರಿ ಬ್ಯಾಕುಗಳು ನಿರಾಕರಿಸಿದ್ದವು. ಹಣವನ್ನು ಹಿಂದಿರುಗಿಸುವಂತೆ ಕೇರಳ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಪ್ರಶ್ನಿಸಿ ಕೇರಳದ ಕೆಲವು ಸಹಕಾರಿ ಬ್ಯಾಂಕುಗಳು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ವಿಚಾರಣೆಯ ಸಮಯದಲ್ಲಿ, ಹೈಕೋರ್ಟ್ ನಿರ್ದೇಶನದಲ್ಲಿ ತಪ್ಪೇನಿದೆ ಎಂದು ಸುಪ್ರೀಂ ಪೀಠ ಪ್ರಶ್ನಿಸಿದೆ.

“ನೀವು ಬ್ಯಾಂಕ್ ಉಳಿಸಲು ದೇವಾಲಯದ ಹಣ ಬಳಸಲು ಬಯಸುತ್ತೀರಾ? ದೇವಾಲಯದ ಹಣ ಬಹಳ ಕಷ್ಟದಿಂದ ಉಸಿರಾಡುತ್ತಿರುವ ಸಹಕಾರಿ ಬ್ಯಾಂಕಿನಲ್ಲಿರುವ ಬದಲು, ಗರಿಷ್ಠ ಬಡ್ಡಿಯನ್ನು ನೀಡಬಲ್ಲ ಆರೋಗ್ಯಕರ ರಾಷ್ಟ್ರೀಕೃತ ಬ್ಯಾಂಕ್‌ಗೆ ಹೋಗಬೇಕೆಂದು ನಿರ್ದೇಶಿಸುವುದರಲ್ಲಿ ತಪ್ಪೇನು?” ಎಂದು ಸಿಜೆಐ ಕಾಂತ್ ಕೇಳಿದರು. “ಮೊದಲನೆಯದಾಗಿ, ದೇವಾಲಯದ ಹಣ ದೇವರಿಗೆ ಸೇರಿದೆ. ಆದ್ದರಿಂದ, ಈ ಹಣವನ್ನು ದೇವಾಲಯದ ಹಿತಾಸಕ್ತಿಗಳಿಗಾಗಿ ಮಾತ್ರ ಉಳಿಸಬೇಕು, ರಕ್ಷಿಸಬೇಕು ಮತ್ತು ಬಳಸಬೇಕು. ಇದು ಸಹಕಾರಿ ಬ್ಯಾಂಕಿನ ಆದಾಯ ಅಥವಾ ಉಳಿವಿನ ಮೂಲವಾಗಲು ಸಾಧ್ಯವಿಲ್ಲ” ಎಂದು ಸಿಜೆಐ ಹೇಳಿದರು. ಬ್ಯಾಂಕ್‌ಗಳ ವಕೀಲರಾದ ವಕೀಲ ಮನು ಕೃಷ್ಣನ್ ಜಿ, ಎರಡು ತಿಂಗಳೊಳಗೆ ಠೇವಣಿಗಳನ್ನು ಹಿಂದಿರುಗಿಸುವಂತೆ ಹೈಕೋರ್ಟ್ ಹೊರಡಿಸಿದ “ಹಠಾತ್” ನಿರ್ದೇಶನ ತೊಂದರೆಗಳನ್ನು ಉಂಟುಮಾಡುತ್ತಿದೆ ಎಂದು ವಾದಿಸಿದರು. “ನೀವು ಜನರಲ್ಲಿ ನಿಮ್ಮ ವಿಶ್ವಾಸಾರ್ಹತೆಯನ್ನು ಸ್ಥಾಪಿಸಬೇಕು. ನೀವು ಗ್ರಾಹಕರನ್ನು ಮತ್ತು ಠೇವಣಿಗಳನ್ನು ಆಕರ್ಷಿಸಲು ಸಾಧ್ಯವಾಗದಿದ್ದರೆ, ಅದು ನಿಮ್ಮ ಸಮಸ್ಯೆ” ಎಂದು ಸಿಜೆಐ ಹೇಳಿದ್ದಾರೆ.

ಠೇವಣಿಗಳು ಅವಧಿ ಮುಕ್ತಾಯಗೊಂಡಾಗ ಬ್ಯಾಂಕುಗಳು ತಕ್ಷಣವೇ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು. ಪೀಠ ಅಂತಿಮವಾಗಿ ಅರ್ಜಿಗಳನ್ನು ವಜಾಗೊಳಿಸಿತು, ಅರ್ಜಿದಾರರಿಗೆ ಸಮಯ ವಿಸ್ತರಣೆಯನ್ನು ಕೋರಿ ಹೈಕೋರ್ಟ್ ಸಂಪರ್ಕಿಸಲು ಸ್ವಾತಂತ್ರ್ಯವನ್ನು ನೀಡಿದೆ. ಆಗಸ್ಟ್‌ನಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮನಾಥನವಾಡಿ ಕೋ-ಆಪರೇಟಿವ್ ಅರ್ಬನ್ ಸೊಸೈಟಿ ಲಿಮಿಟೆಡ್ ಮತ್ತು ತಿರುನೆಲ್ಲಿ ಸರ್ವಿಸ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಈ ಅರ್ಜಿಗಳನ್ನು ಸಲ್ಲಿಸಿದ್ದವು. ಪದೇ ಪದೇ ವಿನಂತಿಸಿದರೂ ಸ್ಥಿರ ಠೇವಣಿಗಳನ್ನು ಮರುಪಾವತಿಸಲು ಸಹಕಾರಿ ಬ್ಯಾಂಕುಗಳು ನಿರಾಕರಿಸಿದ್ದರಿಂದ ಅಸಮಾಧಾನಗೊಂಡ ತಿರುನೆಲ್ಲಿ ದೇವಸ್ವಂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು.

You may also like