ಪುತ್ತೂರು: ನೆಲ್ಲಿಕಟ್ಟೆ ಪ್ರದೇಶದಲ್ಲಿ ಇಬ್ಬರು ಯುವಕರ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಕುರಿತು ವರದಿಯಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಪ್ರಸಾದ್ ಶೆಟ್ಟಿ ಬನ್ನೂರು ಮತ್ತು ಇತರ ಇಬ್ಬರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲ್ಲಿಕಟ್ಟೆ ಎಂಎನ್‌ಎಸ್ ಕಾಂಪೌಂಡ್ ನಿವಾಸಿ ದಿ.ಪ್ರಭಾಕರ ಶೆಟ್ಟಿ ಅವರ ಪುತ್ರ ಪ್ರಶಾಂತ್ (39) ಈ ಕುರಿತು ಪೊಲೀಸರಿಗೆ ದೂರನ್ನು ನೀಡಿರುವುದಾಗಿ ವರದಿಯಾಗಿದೆ.
ಡಿ.4 ರಂದು ಪ್ರಶಾಂತ್ ಮತ್ತು ಗೌರವ್ ಶೆಟ್ಟಿ ರಾತ್ರಿ 11.30 ರ ಸುಮಾರಿಗೆ ನೆಲ್ಲಿಕಟ್ಟೆ ಬಾರ್ ಬಳಿ ನಿಂತು ಮಾತನಾಡುತ್ತಿದ್ದರು. ಈ ವೇಳೆ ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ಅಪರಿಚಿತರು ಇವರ ಸಮೀಪ ಬಂದು ನಿಂತಿದ್ದು, ಆಗ ಪ್ರಶಾಂತ್ ಏನು ವಿಷಯ ಎಂದು ಕೇಳಿದ್ದು, ಪ್ರಸಾದ್ ಶೆಟ್ಟಿ ಎಂಬಾತ ಆಗ ಅವಾಚ್ಯ ಶಬ್ದಗಳ ನಿಂದನೆ ಮಾಡಿದ್ದು, ಪ್ರಶಾಂತ್ ಬಲಗೈ ಕಿರುಬೆರಳಿಗೆ ಕಚ್ಚಿ ರಕ್ತಗಾಯ ಮಾಡಿ ಕಲ್ಲಿನಿಂದ ಎಡಗೈಗೆ ಹೊಡೆದಿರುವುದಾಗಿ ವರದಿಯಾಗಿದೆ. ಗೌರವ್ ಶೆಟ್ಟಿ ಅವರ ಬಲಗೈ ಕೋಲು ಬೆರಳಿಗೆ ಕಚ್ಚಿ ಹಲ್ಲೆ ಮಾಡಲಾಗಿದೆ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆ ಮಾಡಿದ ಆರೋಪಿಗಳು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಪ್ರಶಾಂತ್ ಮತ್ತು ಗೌರವ್ ಶೆಟ್ಟಿ ಮರುದಿನ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.
ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಪ್ರಸಾದ್ ಶೆಟ್ಟಿ ಬನ್ನೂರು ಮತ್ತು ಇತರ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲು ಮಾಡಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
