ಮಂಗಳೂರಿನಲ್ಲಿ ನಟ ರಿಷಬ್ ಶೆಟ್ಟಿ ಅವರು ಹರಕೆ ಕೋಲ ಮಾಡಿಸಿದ್ದರು. ಈ ವೇಳೆ ರಿಷಬ್ ಕಾಲ ಮೇಲೆ ದೈವಾರಾಧಕ ಮಲಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ರಿಷಬ್ ಕಾಲ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ, ದೈವವಲ್ಲ ಬದಲಾಗಿ ನರ್ತಕ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಗುರುವಾರ ಡಿ.4 ರಂದು ಮಂಗಳೂರಿನ ಬಾರೆಬೈಲ್ ಅಲ್ಲಿ ವಾರಾಹಿ ಪಂಜುರ್ಲಿ, ಅರಸು ಜಾರಂದಾಯ ಹಾಗೂ ಬಂಟ ದೈವಸ್ಥಾನದಲ್ಲಿ ಹರಕೆಯ ಕೋಲ ನಡೆಯಿತು. ಈ ಸಂದರ್ಭದಲ್ಲಿ ದೈವ ನರ್ತಕ ರಿಷಬ್ ಕಾಲ ಮೇಲೆ ಮಲಗಿದ್ದರು. ಕೋಲದ ಸಮಯದಲ್ಲಿ ದೈವ ನರ್ತಕ ರಿಷಬ್ ಜೊತೆಗೆ ವರ್ತಿಸಿದಿ ರೀತಿ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ.
ತುಳುನಾಡಿನ ದೈವಾರಾಧನೆಯಲ್ಲಿ ದೈವಗಳು ಈ ರೀತಿ ವರ್ತಿಸುವುದಿಲ್ಲ.ರಿಷಬ್ ಕಾಲ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ,ದೈವವಲ್ಲ ಬದಲಾಗಿ ನರ್ತಕ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕಾಂತಾರದಿಂದ ದೈವಗಳು ಬೀದಿಗೆ ಬಂದಿವೆ. ಈಗ ಹರಕೆಯ ನೇಮೋತ್ಸವದಿಂದ ದೈವರಾಧನೆ ಸಂಪೂರ್ಣ ಮುಗಿಯಿತು ಎಂಬಂತಾಗಿದೆ. ಹರಕೆ ನೀಡುವುದುಕ್ಕೂ ಅದರದ್ದೆ ಆದ ಕಟ್ಟುಪಾಡುಗಳಿವೆ. ಇತ್ತೀಚೆಗೆ ನಡೆದಿದ್ದು ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ. ರಿಷಬ್ ಶೆಟ್ಟಿಗೆ ಡೇಟ್ ಇದೆ ಎಂದು ಕದ್ರಿ ಮಂಜುನಾಥನನ್ನು ಬದಿಗೆ ಬಿಟ್ಟು ಇವರು ನೇಮ ಮಾಡಿದ್ದಾರೆ’ ಎಂದು ತಮ್ಮಣ್ಣ ಶೆಟ್ಟಿ ಅವರು ಟಿವಿ9ಗೆ ಹೇಳಿರುವ ಕುರಿತು ವರದಿಯಾಗಿದೆ.
‘ನರ್ತಕ ಹಾಕಿದ ಬಟ್ಟೆಗಳೆಲ್ಲಾ ದೈವರಾಧನೆಗೆ ವಿರುದ್ಧವಾಗಿದೆ. ಅವರು ಡ್ಯಾನ್ಸರ್ಗಳು ಹಾಕುವ ಬಟ್ಟೆ ಹಾಕಬಾರದು. ದೈವ ಕಡ್ತಳೆಯನ್ನು ತಲೆಗೆ ಹೊಡೆದುಕೊಳ್ಳುವುದಿಲ್ಲ. ಪಲ್ಟಿ ಹೊಡೆಯುವ ದೈವಗಳು ಬೇರೆ ಇದೆ. ಇತ್ತೀಚೆಗೆ ನಡೆದಿರುವ ನೇಮ ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ’ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
‘ಇದಕ್ಕೆ ಮುಂದಿನ ದಿನ ಭಾರಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಜನರನ್ನು ಮೆಚ್ಚಿಸಲು ಮೋಸ ಮಾಡಬೇಡಿ. ರಿಷಬ್ ಶೆಟ್ಟಿ ಸಿನಿಮಾ ಮಾಡುವ ಒಬ್ಬ ವ್ಯಾಪಾರಿ. ರಿಷಬ್ ಶೆಟ್ಟಿಯ ಕಾಲ ಬುಡದಲ್ಲಿ ದೈವ ಹೇಗೆ ಬೀಳುತ್ತೆ? ಈ ದೈವ ನರ್ತಕನೇ ದೈವರಾಧನೆಯ ಅಸ್ಮಿತೆಯನ್ನು ರಿಷಬ್ ಶೆಟ್ಟಿಗೆ ಮಾರಾಟ ಮಾಡಿದ್ದಾನೆ. ದೈವಕ್ಕೂ ರಿಷಬ್ ಶೆಟ್ಟಿಗೂ ಏನು ಸಂಬಂಧ ಇದೆ? ಶರ್ಟ್ ಹಾಕಿದವರನ್ನು ಯಾವ ದೈವವೂ ಮುಟ್ಟಲ್ಲ. ಹೊರಳಾಡಿ, ಬಕೇಟ್ ಹಿಡಿದು ಯಾರ ಜೊತೆಯೂ ಮಾತನಾಡುವುದಿಲ್ಲ’ ಎಂಬುದು ತಮ್ಮಣ್ಣ ಅವರ ಅಭಿಪ್ರಾಯವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
