Karnataka Gvt : ಸರ್ಕಾರಿ ಕಾರ್ಯಕ್ರಮ, ಕೆಲಸಗಳಿಗೆ ರಾಜ್ಯಪಾಲರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರಕಾರದ ಅತಿ ಗಣ್ಯ ವ್ಯಕ್ತಿಗಳು ತುರ್ತು ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಸಲು ಅತ್ಯುತ್ತಮ ಗುಣಮಟ್ಟದ ಹೆಲಿಕ್ಯಾಪ್ಟರ್ (helicopter), ವಿಶೇಷ ವಿಮಾನದ ಸೇವೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯುವ ಸಂಬಂಧ ಸಭೆ ನಡೆಸಲಾಗಿದೆ.
ಹೌದು, ಡಿಸಿಎಂ ಡಿ ಕೆ ಶಿವಕುಮಾರ್ (DK Shivakumar) ನೇತೃತ್ವದ ಸಮಿತಿಯು ಬೆಳಗಾವಿ ಸುವರ್ಣಸೌಧದಲ್ಲಿ ಮಂಗಳವಾರ ರಾಜ್ಯಪಾಲರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರಕಾರದ ಅತಿ ಗಣ್ಯ ವ್ಯಕ್ತಿಗಳ ಸುರಕ್ಷಿತ ಪ್ರಯಾಣಕ್ಕೆ ಅತ್ಯುತ್ತಮ ಗುಣಮಟ್ಟದ ಹೆಲಿಕ್ಯಾಪ್ಟರ್ (helicopter), ವಿಶೇಷ ವಿಮಾನದ ಸೇವೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯುವ ಬಗ್ಗೆ ಸಭೆ ಸೇರಿ ಸಮಾಲೋಚನೆ ನಡೆಸಿದೆ.
ಸಭೆಯಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್, ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆ ಬಳಿಕ ಮಾತಾಡಿದ ಡಿಸಿಎಂ ಶಿವಕುಮಾರ್, ‘ನಮಗೆ ಸಿಎಂ ಒಂದು ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ರು. ನಾವು ಎಚ್ಎಎಲ್ಗೆ ಒಂದು ಹೆಲಿಕ್ಯಾಪ್ಟರ್ ಕೊಡಿ ಎಂದು ಕೇಳಿದ್ದೇವು. ಆದರೆ, ರಾಜನಾಥ್ ಸಿಂಗ್ ಏರ್ ಶೋಗೆ ಬಂದಾಗ ಹೆಲಿಕಾಪ್ಟರ್ ನೋಡಿದ್ವಿ. ಎಚ್ಎಎಲ್ನವರೇ ಹೆಲಿಕಾಪ್ಟರ್ ಮೇಂಟೆನೆನ್ಸ್ ಮಾಡ್ತಿದ್ದಾರೆ. ಆದರೆ, ಲೇಟಾಗುತ್ತೆ ಅಂತ ಹೇಳಿದ್ದಾರೆ ಎಂದರು.
ಅಲ್ಲದೆ “ಇದಕ್ಕೆ ಟೆಂಡರ್ ಕರೆಯಲಾಗಿದ್ದು, ಕೆಲವರು ಭಾಗಿಯಾಗಿದ್ದಾರೆ. ಹೀಗಾಗಿ ಸಂಪುಟ ಉಪಸಮಿತಿ ಸದಸ್ಯರಾದ ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್ ಹಾಗೂ ಅಧಿಕಾರಿಗಳು ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಮುಂದಿನ ಸೋಮವಾರ ಅಥವಾ ಮಂಗಳವಾರ ಮತ್ತೊಂದು ಸಭೆ ಮಾಡುತ್ತೇವೆ. ಇದಕ್ಕೆ ತಾಂತ್ರಿಕವಾಗಿ ಪರಿಣಿತಿ ಹೊಂದಿರುವವರು ಬೇಕು. ಬೇರೆ ಸರ್ಕಾರಗಳಿಗೆ ಉತ್ತಮ ಸೇವೆ ನೀಡಿರುವಂತಹವರನ್ನು ನಾವು ಪರಿಗಣಿಸುತ್ತೇವೆ. ನಮಗೆ ಸುರಕ್ಷತೆ ಹಾಗೂ ಸರ್ಕಾರದ ಹಣ ಎರಡೂ ಮುಖ್ಯ” ಎಂದು ತಿಳಿಸಿದರು.
